– ಇಬ್ಬರು ಪೇದೆ, ಉಪ ತಹಶೀಲ್ದಾರ್ ಸೇರಿ 13 ಜನರಿಗೆ ಕೊರೊನಾ
ಹಾವೇರಿ: ಜಿಲ್ಲೆಯಲ್ಲಿ ಕೊರೊನಾಗೆ ಇಂದು ಓರ್ವ ಮಹಿಳೆ ಸಾವನ್ನಪ್ಪಿದ್ದು ಈ ಮೂಲಕ ಒಟ್ಟು 4 ಜನ ಸಾವನ್ನಪ್ಪಿದಂತಾಗಿದೆ. ಅಲ್ಲದೆ ಇಂದು ಇಬ್ಬರು ಪೇದೆ, ಉಪ ತಹಶೀಲ್ದಾರ್ ಸೇರಿ 13 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯ ಜನರನ್ನು ಆತಂಕ್ಕೀಡು ಮಾಡಿದೆ.
ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ 45 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ, ರೋಗಿ ನಂ.23227ರ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿತ್ತು.
ಹಾವೇರಿ ತಾಲೂಕಿನಲ್ಲಿ 31 ವರ್ಷದ ನಗರ ಪೊಲೀಸ್ ಠಾಣೆ ಪೇದೆ ಸೇರಿದಂತೆ 4 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಮುಂಬೈಗೆ ಹೋಗಿ ಬಂದಿರುವ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ನಾಲ್ವರು ಸೇರಿದಂತೆ 6 ಜನರಿಗೆ ಸೋಂಕು ದೃಢಪಟ್ಟಿದೆ. ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಉಪ ತಹಶೀಲ್ದಾರ್‍ಗೂ ಸೋಂಕು ವಕ್ಕರಿಸಿದೆ.
ಐದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದ ಹಾನಗಲ್ ಜೆಎಂಎಫ್‍ಸಿ ನ್ಯಾಯಾಲಯದ 28 ವರ್ಷದ ಸ್ಟೇನೋ ಗ್ರಾಫರ್‍ಗೆ ಕೊರೊನಾ ಕಾಣಿಸಿಕೊಂಡಿದೆ. ಅಲ್ಲದೆ ಹಾನಗಲ್ ಪಟ್ಟಣ ಮತ್ತು ಅಕ್ಕಿಆಲೂರು ಗ್ರಾಮದ ತಲಾ ಒಬ್ಬರು ಗರ್ಭೀಣಿಯರಿಗೆ ಕೊರೊನಾ ದೃಢಪಟ್ಟಿದೆ. ಸವಣೂರು ಪೊಲೀಸ್ ಠಾಣೆಯ 40 ವರ್ಷದ ಪೇದೆಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಹದಿಮೂರು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮರಣ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. 18 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.