ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಇಮದು ಜಾಮೀನು ಮಂಜೂರಾಗಿದೆ. ಇವತ್ತಿನ ದಿನ ನಮಗೆ ತುಂಬಾ ಲಕ್ಕಿಯಾಗಿದೆ ಎಂದು ನಟಿ ತಾಯಿ ರೋಹಿಣಿ ದ್ವಿವೇದಿ ಸಂತಸ ಹಂಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಗಳಿಗೆ ಇಂದು ಜಾಮೀನು ಸಿಕ್ಕಿದ್ದು, ನಮಗೆಲ್ಲ ತುಂಬಾ ಖುಷಿಯಾಗಿದೆ. ಆಕೆ ಮನೆಗೆ ಬರುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಇದೂವರೆಗೂ ಯಾವುದೇ ಸಾಕ್ಷ್ಯ ಇಲ್ಲದೆ ಅವರು ಆಕೆಯನ್ನು ಜೈಲಿನಲ್ಲಿ ಇಟ್ಟುಕೊಂಡಿದ್ದರು ಎಂದು ಆರೋಪಿಸಿದರು. ಜಾಮೀನು ಮಂಜೂರಾಗಿದೆ ಅಂತ ಈಗಷ್ಟೇ ದೆಹಲಿಯಿಂದ ಫೋನ್ ಕರೆ ಬಂತು. ಹೀಗಾಗಿ ಆಕೆಯನ್ನು ಕರೆದುಕೊಂಡು ಬರಲು ನಾವು ಹೋಗಬೇಕು ಎಂದು ತಿಳಿಸಿದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.
ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯವರನ್ನ ಬಂಧಿಸಲಾಗಿದೆ. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.
ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.



