ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ದೆಹಲಿಯ ಗಡಿಗಳತ್ತ ದೊಡ್ಡ ಮಟ್ಟದಲ್ಲಿ ರೈತರು ಬಂದು ಸೇರುವುದು ಹೆಚ್ಚಾಗುತ್ತಲೇ ಇದೆ. ಇದರಿಂದ ಉತ್ತೇಜಿತರಾದಂತಿರುವ ರೈತ ಮುಖಂಡರು, ಮತ್ತೊಮ್ಮೆ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ದೆಹಲಿ ಪರೇಡ್ ಬಳಿಕ ಇದೀಗ ‘ಚಕ್ಕಾ ಜಾಮ್’ಗೆ ಕರೆ ನೀಡಿದ್ದಾರೆ.
Advertisement
ಇಂದು ದೆಹಲಿ ಹೊರತುಪಡಿಸಿ ಇಡೀ ದೇಶಾದ್ಯಂತ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದರಿ ಬಂದ್‍ಗೆ ಕರೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಹೈವೇ ಬಂದ್ ನಡೆಸಲು ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕರ್ನಾಟಕ ಅನ್ನದಾತರ ಬೆಂಬಲ ಸಿಕ್ಕಿದೆ. ದೆಹಲಿಯ ಗಡಿಗಳಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಆಗಮಿಸಿದ್ದು, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಗಣರಾಜ್ಯೋತ್ಸವದ ಬಳಿಕ ಇಂದು ದೊಡ್ಡ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕಡೆ ಭದ್ರತೆ ಹೆಚ್ಚಿಸಿದೆ. ಹೈ ಅಲರ್ಟ್ ಘೋಷಿಸಿದೆ.
Advertisement
Advertisement
ರಾಜ್ಯದಲ್ಲಿಯೂ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್‍ಗೆ ರೈತರು ಸಿದ್ಧತೆ ನಡೆಸಿದ್ದಾರೆ. ಪ್ರಮುಖ ರೈತ ಮುಖಂಡರು ಬೆಂಗಳೂರಿನಲ್ಲಿಯೇ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇದರಿಂದ ಬೆಂಗಳೂರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳೋ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಊರಿಗೆ ಹೊರಡುವ ಜನರಿಗೆ ಇದರಿಂದ ಸಮಸ್ಯೆ ಎದುರಾಗಲಿದೆ. ಬೆಂಗಳೂರು ಸಂಪರ್ಕಿಸುವ ಎಲ್ಲಾ ಹೈವೇಗಳನ್ನು ಬಂದ್ ಮಾಡಲು ರೈತರು ಸಜ್ಜಾಗಿದ್ದಾರೆ. ಏರ್ ಪೋರ್ಟ್ ರೋಡ್ ಜಾಮ್ ಆಗೋ ಸಂಭವ ಇದೆ.
Advertisement
ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಜಿಲ್ಲಾ ಮಟ್ಟಗಳಲ್ಲಿ ರಸ್ತೆ ತಡೆ ನಡೆಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಘಾಜೀಪುರ್ ಗಡಿಯಿಂದ ಕರೆ ಕೊಟ್ಟಿದ್ದಾರೆ. ಆದರೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಲು ಮತ್ತು ಹೈವೇ ಬಂದ್ ನಡೆಸೋದಕ್ಕೆ ರೈತರು ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಇದು ದೇಶವ್ಯಾಪಿ ನಡೆಯೋ ಪ್ರತಿಭಟನೆ. ಹೀಗಾಗಿ ಹೈವೇ ಬಂದ್‍ಗೆ ಅನುಮತಿ ಕೇಳಲ್ಲ. ಇದಕ್ಕೆ ಖಾಕಿ ಅಡ್ಡಿಪಡಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.