ಬೆಂಗಳೂರು: ಜೈಲುವಾಸ ಅಂತ್ಯ ಬಳಿಕ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮರಳಿ ತಮಿಳುನಾಡಿಗೆ ತೆರಳಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.
ತಮಿಳುನಾಡಿನಲ್ಲಿ ಶಶಿಕಲಾ ಸ್ವಾಗತಕ್ಕೆ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಕೊರೊನಾ ಹಿನ್ನೆಲೆ ವಿಕ್ಟೋರಿಯಾಗೆ ದಾಖಲಾಗಿದ್ದ ಶಶಿಕಲಾ ಜೈಲು ಶಿಕ್ಷೆ ಪೂರ್ಣ ಬಳಿಕ ಜನವರಿ 27ರಂದು ಬಿಡುಗಡೆಯಾಗಿದ್ದರು. ನಂತರದಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕವೂ ದೇವನಹಳ್ಳಿಯ ರೆಸಾರ್ಟ್ ನಲ್ಲಿ ತಂಗಿದ್ರು. ಇಂದು ಮರಳಿ ತಮಿಳುನಾಡಿಗೆ ತೆರಳಲಿದ್ದು, ರಾಜಕೀಯ ಗರಿಗೆದರಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಶಶಿಕಲಾ ಮುಂದೇನು ಮಾಡ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಈ ಮೊದಲು ಅಮವಾಸ್ಯೆ ಬಳಿಕ ಅಂದ್ರೆ ಫೆಬ್ರವರಿ 11ರ ನಂತರ ಶಶಿಕಲಾ ತಮಿಳುನಾಡಿಗೆ ಹಿಂದಿರುಗಲಿದ್ದಾರೆ ಎಂದು ಹೇಳಲಾಗಿತ್ತು. ಜನವರಿ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು.