ಇಂದು ಕೂಡ ಬಸ್ ಸಿಗಲ್ಲ – 2ನೇ ದಿನವೂ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಬಂದ್

Public TV
2 Min Read
BNG 5 1

– ಡಿಪೋ ಸೇರಿದ ಬಸ್ಸುಗಳು, ಅಹೋರಾತ್ರಿ ಪ್ರತಿಭಟನೆ ತೀವ್ರ

ಬೆಂಗಳೂರು: ಇಂದು ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಿಗಲ್ಲ, ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳ ಓಡಾಟ ಇರಲ್ಲ. ನಿನ್ನೆಯಿಂದ ಆರಂಭ ಆಗಿರುವ ಕೆಎಸ್ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಪ್ರತಿಭಟನೆ ಇಂದು ಕೂಡ ಮುಂದುವರಿಯಲಿದೆ. ಹೀಗಾಗಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್‍ಗಳು ಶನಿವಾರವೂ ರೋಡಿಗಿಳಿಯಲ್ಲ.

BNG 4 1

ಬಸ್ಸುಗಳನ್ನು ಡಿಪೋದಲ್ಲಿ ಹಾಕಿರುವ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ಮುಂದುವರಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರನ್ನಾಗಿ ಮಾಡಬೇಕು ಅನ್ನೋದ್ರಿಂದ ಹಿಡಿದು ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಸರ್ಕಾರ ಪ್ರತಿಭಟನಾನಿರತ ಸಿಬ್ಬಂದಿಯ ಪ್ರತಿನಿಧಿಗಳ ಜೊತೆಗೆ ಸಂಧಾನಕ್ಕೆ ಗಂಭೀರ ಪ್ರಯತ್ನ ಮಾಡಿದಂತಿಲ್ಲ.

BNG 3 2

ಕೆಎಸ್ಆರ್‌ಟಿಸಿ ಸಿಬ್ಬಂದಿಯನ್ನು ಪ್ರತಿನಿಧಿಸುವ ಸಿಐಟಿಯು ಅಧ್ಯಕ್ಷ ಅನಂತ್ ಸುಬ್ಬರಾವ್ ಜೊತೆಗೆ ನಿನ್ನೆಯಷ್ಟೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಸಿಐಟಿಯು ಪಾಲ್ಗೊಂಡಿಲ್ಲ. ಅಷ್ಟೇ ಅಲ್ಲದೇ ಈ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಸಿಐಟಿಯು ಹೇಳಿದೆ. ಇತ್ತ ಬೆಂಗಳೂರಲ್ಲಿ ರೈತರು ನಡೆಸಿದ್ದ ಹೋರಾಟದಲ್ಲಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯೂ ಪಾಲ್ಗೊಂಡಿದ್ದರು. ಈ ವೇಳೆ ಸಿಬ್ಬಂದಿಯನ್ನ ಸರ್ಕಾರ ಪೊಲೀಸರನ್ನು ಬಳಸಿ ವಶಕ್ಕೆ ಪಡೆದು ಎಳೆದೊಯ್ದಿತ್ತು. ಇದು ಸಾರಿಗೆ ಸಿಬ್ಬಂದಿ ಕೆಂಗಣ್ಣಿಗೆ ಕಾರಣವಾಗಿದೆ.

BNG 2 3

ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘಟನೆ ಸಾರಿಗೆ ಸಿಬ್ಬಂದಿ ಪ್ರತಿಭಟನೆಗೆ ಬೆಂಬಲ ನೀಡಿದೆ. ಆದರೆ ಸಾರಿಗೆ ಸಚಿವ ಸವದಿ ಹೇಳುವ ಪ್ರಕಾರ ಕೋಡಿಹಳ್ಳಿಗೂ ಸಾರಿಗೆ ಮುಷ್ಕರಕ್ಕೂ ಸಂಬಂಧವಿಲ್ಲ. ಬಹುತೇಕ ಸಂಘಟನೆಗಳು ಈಗ ರೈತ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿವೆ. ನೌಕರರನ್ನಾಗಿ ಮಾಡ್ಬೇಕೆಂದು ಸಾರಿಗೆ ಸಿಬ್ಬಂದಿ ಹಲವು ತಿಂಗಳಿಂದ ಸಣ್ಣ ಪ್ರಮಾಣದ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಏನೂ ಆಗಲಾರದು ಎಂಬ ಸರ್ಕಾರದ ಉಡಾಫೆಯ ಮನಸ್ಥಿತಿಯೇ ಇಷ್ಟೆಲ್ಲ ಪ್ರತಿಭಟನೆ, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

BNG 1 3

ಇತ್ತ ಸರ್ಕಾರ ಎಸ್ಮಾ(ಅಗತ್ಯ ಸೇವೆ ನಿರ್ವಹಣೆ ಕಾಯಿದೆ) ಜಾರಿ ಮಾಡುವ ಬಗ್ಗೆ ಸುಳಿವು ನೀಡಿದೆ. ಖಾಸಗಿ ಬಸ್‍ಗಳನ್ನು ಓಡಿಸುವುದಾಗಿ ಮುನ್ಸೂಚನೆ ನೀಡಿದೆ. ಆದರೆ ಇವೆಲ್ಲವೂ ಬಿಕ್ಕಟ್ಟು ಶಮನಕ್ಕೆ ನೆರವಾಗುವ ಸಾಧ್ಯತೆಗಳು ಕಡಿಮೆ.

Share This Article
Leave a Comment

Leave a Reply

Your email address will not be published. Required fields are marked *