– ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ಭಯದ ಮಧ್ಯೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ರಾಜ್ಯಾದ್ಯಂತ ಒಟ್ಟು 8,48,203 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ. ಇಂದಿನಿಂದ ಜುಲೈ 4ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
Advertisement
ಬೆಳಗ್ಗೆ 10.30 ರಿಂದ 1.30 ವರೆಗೆ ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡ್ಕೊಂಡಿದೆ. ಎಲ್ಲಾ ಕಡೆ ಎರಡೆರಡು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ರಾಜ್ಯಾದ್ಯಂತ ಇರೋ 3,209 ಪರೀಕ್ಷಾ ಕೇಂದ್ರಗಳಲ್ಲಿ 4,48,560 ಬಾಲಕರು ಹಾಗೂ 3,99,643 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. 2879 ಸಾಮಾನ್ಯ ಪರೀಕ್ಷಾ ಕೇಂದ್ರಗಳು, 330 ಬ್ಲಾಕ್ ಪರೀಕ್ಷಾ ಕೇಂದ್ರಗಳು ಅಂದ್ರೆ ಹೆಚ್ಚುವರಿ ಕೇಂದ್ರಗಳು, 57 ಸೂಕ್ಷ್ಮ ಪರೀಕ್ಷಾ ಕೇಂದ್ರಗಳು, 4 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
Advertisement
Advertisement
ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ವ್ಯವಸ್ಥೆ ಇದೆ?
ರಾಜ್ಯಾದ್ಯಂತ ಒಟ್ಟು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 3,209 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ 7,115 ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲಾಗ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಒಟ್ಟು 34 ಹೆಲ್ಪ್ ಡೆಸ್ಕ್ ಹಾಗೂ ತಾಲೂಕು ಕೇಂದ್ರದಲ್ಲಿ ಒಟ್ಟು 204 ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5,755 ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಭೀತಿ ಇಲ್ಲದೇ ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.
Advertisement
ಕೊರೊನಾ ದಿನೇ ದಿನೇ ಹೆಚ್ಚಳ ಆಗ್ತಿದೆ. ಸಹಜವಾಗಿ ಆತಂಕ ಇರುತ್ತೆ. ಆದರೆ ವಿದ್ಯಾರ್ಥಿಗಳು ಈ ಆತಂಕ ಬಿಟ್ಟು ಪರೀಕ್ಷೆ ಬರೆಯಬೇಕು. ಪರೀಕ್ಷೆ ಬರೆಯುತ್ತಿರೋ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಕಡೆಯಿಂದ ಒಂದಿಷ್ಟು ಸಲಹೆ ಹೀಗಿವೆ. ಎಸ್‍ಎಸ್‍ಎಲ್‍ಸಿ ಮಕ್ಕಳೇ ಮೊದಲು ಸೋಂಕಿನ ಆತಂಕ ಬಿಡಿ. ಕೊರೊನಾ ಕುರಿತ ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಪರೀಕ್ಷೆ ಚನ್ನಾಗಿ ಬರೆಯೋಣ ಅನ್ನೋದು ಮಾತ್ರ ನಿಮ್ಮ ಮನಸ್ಸಿನಲ್ಲಿ ಇರಲಿ. ಆತಂಕವಿಲ್ಲದೇ ಪರೀಕ್ಷೆ ಎದುರಿಸಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ. ಪರೀಕ್ಷೆಗೆ ಒಂದೂವರೆ ಗಂಟೆ ಮೊದಲೇ ಪರೀಕ್ಷಾ ಕೇಂದ್ರ ತಲುಪಿ. ಪರೀಕ್ಷಾ ಕೇಂದ್ರದಲ್ಲಿ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಪೋಷಕರೇ ನಿಮ್ಮ ಮಕ್ಕಳನ್ನು ಗುಂಪು ಸೇರಲು ಬಿಡಬೇಡಿ.
ಒಟ್ಟಾರೆ ಕೊರೊನಾ ಆತಂಕದ ಮಧ್ಯೆ ಸರ್ಕಾರ, ವಿದ್ಯಾರ್ಥಿಗಳು, ಪೋಷಕರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಮಕ್ಕಳು ಭಯವಿಲ್ಲದೆ ಧೈರ್ಯವಾಗಿ ಪರೀಕ್ಷೆ ಎದುರಿಸಿ. ಪಬ್ಲಿಕ್ ಟಿವಿ ಕಡೆಯಿಂದಲು ಎಕ್ಸಾಂ ಬರೆಯುತ್ತಿರೋ ಎಲ್ಲರಿಗೂ ಆಲ್ ದಿ ಬೆಸ್ಟ್.