ಚಾಮರಾಜನಗರ: ಮಲೆ ಮಹದೇಶ್ವರ ದರ್ಶನವನ್ನು ಮತ್ತೆ ಆರಂಭಿಸಲಾಗಿದೆ. ಆದರೆ ದಾಸೋಹ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಬಂದ್ ಮಾಡಿದೆ.
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು, ದೇವಸ್ಥಾನ ಪ್ರವೇಶಕ್ಕೂ ಅನುಮತಿ ನೀಡಲಾಗಿದೆ. ಅಮವಾಸ್ಯೆ ಹಿನ್ನೆಲೆ ಕಳೆದ ಮೂರು ದಿನಗಳಿಂದ ಭಕ್ತರ ದರ್ಶನಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಅಮವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚು ಆಗಮಿಸುತ್ತಾರೆ, ಸಾಮಾಜಿಕ ಅಂತರ ಸೇರಿ ಕೊರೊನಾ ನಿಯಮ ಕಾಪಾಡುವುದು ಕಷ್ಟ ಎಂದು ಮೂರು ದಿನಗಳ ಕಾಲ ದೇಗುಲ ಬಂದ್ ಮಾಡಲಾಗಿತ್ತು.
ಇದೀಗ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಬೆ.7 ರಿಂದ ಸಂಜೆ 7ರ ವರೆಗೆ ಮಾದಪ್ಪನ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ದಾಸೋಹ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆ ಎರಡು ದಿನ ದಾಸೋಹ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಇನ್ನೂ ಎರಡು ದಿನ ದಾಸೋಹದ ವ್ಯವಸ್ಥೆ ಇರುವುದಿಲ್ಲ.