ಚಾಮರಾಜನಗರ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ದೇವಾಲಯದ ಎಲ್ಲ ಸೇವೆಗಳನ್ನು ಪುನರಾರಂಭಿಸಲಾಗಿದೆ.
ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಸೋಹ ಮತ್ತು ಜಾತ್ರೆಗಳನ್ನು ಹೊರತುಪಡಿಸಿ, ನಡೆಯುತ್ತಿದ್ದ ದೈನಂದಿನ ಸಾಂಪ್ರದಾಯಿಕ ಸೇವೆಗಳನ್ನು ಪುನರಾರಂಭಿಸಲು ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲು ನಿಗಧಿಪಡಿಸಿದ್ದ ಕಾಲಮಿತಿ, ಭಕ್ತಾದಿಗಳ ವಾಸ್ತವ್ಯ ಮತ್ತು ಮುಡಿಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಇಂದಿನಿಂದ ಜಾರಿಗೆ ಬರುವಂತೆ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂಆರ್.ರವಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಬೆಳಿಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ, ಎಲ್ಲ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳು ಮಹದೇಶ್ವರನ ಭಕ್ತರಿಗೆ ಮುಕ್ತವಾಗಿವೆ. ಈ ಹಿಂದೆ ದೇವರ ದರ್ಶನ ವ್ಯವಸ್ಥೆ ಮಾತ್ರ ಇತ್ತು. ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವಂತಿರಲಿಲ್ಲ. ಇದೀಗ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು ಭಕ್ತರು ಎಂದಿನಂತೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿಸಬಹುದಾಗಿದೆ.
12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶ ಇರುವುದಿಲ್ಲ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಇದ್ದ ದರ್ಶನ ಹಾಗೂ ಎಲ್ಲ ಸೇವೆಗಳನ್ನು ಬೆಳಿಗ್ಗೆ 4 ರಿಂದ ರಾತ್ರಿ 10ರವರೆಗೆ ವಿಸ್ತರಿಸಲಾಗಿದೆ. ದಾಸೋಹದಲ್ಲಿ ಹಾಲಿ ಇರುವ ತಿಂಡಿ ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ ಭಕ್ತರು ಜಾತಕಪಕ್ಷಿಯಂತೆ ಕಾಯುತ್ತಿದ್ದ ಮುಡಿಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಅಲ್ಲದೆ ರಾತ್ರಿ ದೇವಾಲಯದ ವಸತಿಗೃಹಗಳಲ್ಲಿ ತಂಗುವ ವ್ಯವಸ್ಥೆ ಪ್ರಾರಂಭವಾಗಿದೆ. ಕಾಟೇಜು, ಡಾರ್ಮಿಟರಿಗಳನ್ನೂ ಸಹಾ ನೀಡಲಾಗುವುದು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ.