ರಾಯಚೂರು: ಕೊರೊನಾ 2ನೇ ಅಲೆ ಇಳಿಕೆ ಹಿನ್ನೆಲೆ 52 ದಿನಗಳ ಬಳಿಕ ಇಂದಿನಿಂದ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅನುವುಮಾಡಲಾಗಿದೆ.
Advertisement
ಕೋವಿಡ್ ನಿಯಮಗಳನ್ನು ಪಾಲಿಸುವ ಭಕ್ತರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ನೀಡಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ವ್ಯವಸ್ಥೆಮಾಡಲಾಗಿದೆ. ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ನಿಷೇಧಿಸಲಾಗಿದ್ದು, ಭಕ್ತರಿಗೆ ಪರಿಮಳ ಪ್ರಸಾದ ಮಾತ್ರ ನೀಡಲಾಗುತ್ತಿದೆ. ಮಠದ ಸಿಬ್ಬಂದಿ ಮಾತ್ರ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.
Advertisement
ಆಂಧ್ರ ಪ್ರದೇಶದಲ್ಲೂ ಲಾಕ್‍ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆ ಇಂದಿನಿಂದ ಮಂತ್ರಾಲಯ ಮಠದ ಮುಖ್ಯದ್ವಾರ ತೆರೆಯಲಾಗಿದೆ. ರಾಯಚೂರಿನಿಂದ ಮಂತ್ರಾಲಯ ಸೇರಿದಂತೆ ಆಂಧ್ರ ಪ್ರದೇಶಕ್ಕೆ ಬಸ್‍ಗಳ ಓಡಾಟ ಸಹ ಇಂದಿನಿಂದ ಆರಂಭವಾಗಿದೆ. ಇಷ್ಟು ದಿನ ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ಭಕ್ತರು ಮುಖ್ಯ ದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದರು. ಈಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಕೋವಿಡ್ ನಿಯಮಗಳ ಅನ್ವಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
Advertisement
Advertisement
ರಾಯರ ಭಕ್ತರಿಗೆ ಮುಕ್ತ ಅವಕಾಶ ನೀಡಲು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಆದೇಶ ನೀಡಿದ್ದು, ಅದರಂತೆ ಮಠದ ಆಡಳಿತ ಮಂಡಳಿ ನಿರ್ಧರಿಸಿತ್ತು. ಕೋವಿಡ್ ನಿಯಮಗಳಿಗೆ ಒಳಪಟ್ಟು ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಭಕ್ತಾದಿಗಳು ಸಹ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಂತ್ರಾಲಯ ಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ಹೇಳಿದ್ದರು ಮೂರು ದಿನಗಳ ಹಿಂದೆ ತಿಳಿಸಿದ್ದರು.