ಬೆಂಗಳೂರು: ಇಂದಿನಿಂದ ಸಿನಿಪ್ರಿಯರಿಗೆ ಶೇ.100 ರಷ್ಟು ಮನರಂಜನೆ ಸಿಗಲಿದೆ. ಇಂದು ಕನ್ನಡದ 4 ಸಿನಿಮಾಗಳು ತೆರೆ ಕಾಣಲಿವೆ.
ಹೌದು. ಇಂದಿನಿಂದ ಥಿಯೇಟರ್‍ಗಳಲ್ಲಿ ‘ಸಿನಿಮಾ ಹೌಸ್‍ಫುಲ್’ ಪ್ರದರ್ಶನ ನಡೆಯಲಿದೆ. ಸರ್ಕಾರದ ಶೇ.50ರಷ್ಟು ನೀತಿ ವಿರುದ್ಧ ಸ್ಯಾಂಡಲ್‍ವುಡ್ ಸಿಡಿದೆದ್ದಿತು. ಚಂದನವನದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ, ಇಂದಿನಿಂದ ಹೌಸ್‍ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ.
ಇಂದು 4 ಸ್ಯಾಂಡಲ್‍ವುಡ್ ಚಿತ್ರಗಳು ಬೆಳ್ಳಿತೆರೆಗಪ್ಪಳಿಸಲಿದೆ. ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್ಸ್ ಪೆಕ್ಟರ್ ವಿಕ್ರಂ’, ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೋ’, ಚಂದನ್ ಆಚಾರ್ಯ ಅಭಿನಯದ ‘ಮಂಗಳವಾರ ರಜಾ ದಿನ’, ಹೊಸ ತಾರಾಗಣದ ಮಾಂಜ್ರಾ ಚಿತ್ರ ರಿಲೀಸ್ ಆಗಲಿದೆ. ಈಗಾಗಲೇ ಥಿಯೇಟರ್‍ಗಳಿಗೆ ಪ್ರೇಕ್ಷಕ ಪ್ರಭುವಿನ ದಂಡು ಹರಿದು ಬರುತ್ತಿದೆ.
ಇಡೀ ಚಿತ್ರರಂಗ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ ಸಿಎಂ ಸಲಹೆ ಮೇರೆಗೆ ಸಿನಿಮಾ ರಂಗದ ಗಣ್ಯರೊಂದಿಗೆ ಆರೋಗ್ಯ ಸಚಿವ ಸುಧಾಕರ್ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅವರು, ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಲಾಗಿದ್ದು, ನಾಲ್ಕು ವಾರಗಳಿಗೆ ಮಾತ್ರ ಅನ್ವಯವಾಗಲಿದೆ. ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಈ ಹಿಂದಿನಂತೆ ಶೇ.50 ಸೀಟ್ ಭರ್ತಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು.