ಮಡಿಕೇರಿ: ಕೋವಿಡ್ ಆತಂಕದ ಹಿನ್ನೆಲೆ ಕಳೆದ 80 ದಿನಗಳಿಂದ ಬಂದ್ ಆಗಿದ್ದ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣದಲ್ಲೊಂದಾದ ಅಬ್ಬಿ ಜಲಪಾತ ವೀಕ್ಷಣೆಗೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಅಬ್ಬಿ ಜಲಪಾತವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪ್ಪ, ಮಾಜಿ ಅಧ್ಯಕ್ಷರಾದ ರೀಟಾ ಮುತ್ತಣ್ಣ ಎಂ.ಡಿ.ಬೋಪಣ್ಣ, ಸದಸ್ಯರಾದ ಜಾನ್ಸನ್ ಪಿಂಟೋ,ಸೇರಿದಂತೆ ಮತ್ತಿತರರು ಸಭೆ ನಡೆಸಿ, ಚರ್ಚಿಸಿ ಪ್ರವಾಸಿಗರಿಗೆ ಮುಕ್ತ ಮಾಡಲು ನಿರ್ಣಯ ಕೈಗೊಂಡಿದ್ದಾರೆ.
ಬಳಿಕ ಅಬ್ಬಿ ಜಲಪಾತಕ್ಕೆ ತೆರಳಿ ಜಲಪಾತದ ಮುಂಭಾಗದಲ್ಲಿರುವ ಗೇಟ್ ತೆರೆದರು. ಅನ್‍ಲಾಕ್ ಅಗಿರುವ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ನೂರಾರು ಪ್ರವಾಸಿಗರು ಅಬ್ಬಿ ಜಲಪಾತದ ಸೊಬಗು ನೋಡಲು ಬಂದು ನಿರಾಶೆಯಿಂದ ಹೋರಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತಿ ಅಧ್ಯಕ್ಷರು ಸಭೆ ನಡೆಸಿ ಪ್ರವಾಸಿಗರಿಗೆ ಜಲಪಾತ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದಾರೆ.
ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಎಚ್ಚರ ವಹಿಸುವಂತೆ ಗ್ರಾ.ಪಂ ಪ್ರತಿನಿಧಿಗಳು ಪ್ರವಾಸಿಗರಿಗೆ ಎಚ್ಚರಿಸಿದ್ದಾರೆ.