ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲವಾಗಿಸಿಕೊಂಡಿರುವ ಭಾರತ ಮುಂದಿನ ಪಂದ್ಯಾಟಕ್ಕೆ ತಯಾರಿ ನಡೆಸುತ್ತಿರುವಾಗಲೇ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ ಔಟ್ ಆಗಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯಾಟಕ್ಕಾಗಿ ನೆಟ್‍ನಲ್ಲಿ ಬ್ಯಾಟಿಂಗ್ ಮಾಡುವಾಗ ಕೆಎಲ್ ರಾಹುಲ್ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿದ್ದು, ಚೇತರಿಸಿಕೊಳ್ಳಲು ಮೂರು ವಾರಗಳು ಬೇಕೆಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಈಗಾಗಲೇ ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಿಂದಾಗಿ ಭಾರತಕ್ಕೆ ಮರಳಿದ್ದಾರೆ. ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಗಾಯದಿಂದಾಗಿ ಭಾರತಕ್ಕೆ ವಾಪಾಸಾಗಿದ್ದಾರೆ. ಇದೀಗ ಕೆಎಲ್ ರಾಹುಲ್ ತಂಡದಿಂದ ಬೇರ್ಪಟ್ಟಿರುವುದು ಇನ್ನಷ್ಟು ಚಿಂತೆಗೆ ಕಾರಣವಾಗಿದೆ.
ರಾಹುಲ್ ಮೊದಲ ಎರಡು ಟೆಸ್ಟ್ ಪಂದ್ಯಗಳಿಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಜಾಗ ಪಡೆದುಕೊಂಡಿರಲಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದ ಸೀಮಿತ ಓವರ್‍ಗಳ ಪಂದ್ಯಾಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ರಾಹುಲ್ ಹೊರ ಬರುತ್ತಿದ್ದಂತೆ ಅತ್ತ ಭಾರತ ತಂಡದಲ್ಲಿರುವಂತಹ ಇನ್ ಫಾರ್ಮ್ ಬ್ಯಾಟ್ಸ್‍ಮ್ಯಾನ್‍ಗಳ ಕೊರತೆ ತಲೆದೂರಿದೆ.
ಈಗಾಗಲೇ ಗಾಯದ ಸಮಸ್ಯೆಯಿಂದ ಹೊರ ಬಂದಿರುವ ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರೊಂದಿಗೆ ರಾಹುಲ್ ಸೇರಿಕೊಳ್ಳಲಿದ್ದಾರೆಂದು ಬಿಸಿಸಿಐ ತಿಳಿಸಿದೆ.