ಆನೇಕಲ್: ಮಹಾಮಾರಿ ಕೊರೊನಾದಿಂದಾಗಿ ಸಾಕಷ್ಟು ಅವಾಂತರಗಳು ನಡೆದು ಹೋಗಿವೆ, ಇನ್ನೂ ನಡೆಯುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಂಕಿತನೊಬ್ಬ ಆಸ್ಪತ್ರೆಯ ಮುಂದೆಯೇ ನರಳಾಡಿ ಪ್ರಾಣಬಿಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ನಲ್ಲಿ ನಡೆದಿದೆ.
ಮೃತನನ್ನು ನಾಗೇಶ್ ಎಂದು ಗುರುತಿಸಲಾಗಿದ್ದು, ಈತ ಆನೇಕಲ್ ತಾಲೂಕಿನ ಹಾಲ್ದೇನಹಳ್ಳಿ ನಿವಾಸಿ. ಜ್ವರದಿಂದ ಬಳಲುತ್ತಿದ್ದ ನಾಗೇಶ್‍ಗೆ ಇಂದು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ವರದಿ ಬರುವುದು ವಿಳಂಬವಾಗಿ ಬೆಡ್ ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಎದುರು ಕಾದು ಕುಳಿತಿದ್ದ ಸೋಂಕಿತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗ್ರಾಮ ಪಂಚಾಯ್ತಿ ಸದಸ್ಯ ತಿಮ್ಮರಾಜು ನೇತೃತ್ವದಲ್ಲಿ ಹಾಲ್ದೇನಹಳ್ಳಿ ಕೆರೆಗೆ ಬಳಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆನೇಕಲ್ ತಾಲೂಕು ಆಡಳಿತ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ಆಕ್ರೋಶ ಹೊರಹಾಕಿದ್ದು, ಸೋಂಕಿತ ನರಳಾಡಿ ಸಾವನ್ನಪ್ಪಲು ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.