– ಕೊರೊನಾಗೆ ಹೆದರಿ ಯಾರೂ ಬಿಡಿಸಲಿಲ್ಲ
ಚಿಕ್ಕಮಗಳೂರು: ಕೊರೊನಾ ಸೋಂಕಿತ ಅಣ್ಣನನ್ನು ತಮ್ಮನೇ ಕೊಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು 45 ವರ್ಷದ ಮಹಾವೀರ್ ಎಂದು ಗುರುತಿಸಲಾಗಿದೆ. ಆದರೆ, ಕೊಲೆ ನಡೆಯುವಾಗ ಮಹಾವೀರ್ ಅಮ್ಮ ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದರೂ ಸೋಂಕಿಗೆ ಹೆದರಿ ಜಗಳ ಬಿಡಿಸಲು ಯಾರೂ ಬರಲಿಲ್ಲ ಅನ್ನೋದು ಕೊಲೆಗಿಂತ ಭಯಪಡಬೇಕಾದ ಸಂಗತಿಯಾಗಿದೆ.
ಮಹಾವೀರ್ ಗೆ ಕಳೆದ ವಾರ ಕೊರೊನಾ ದೃಢಪಟ್ಟಿತ್ತು. ಬಳಿಕ ಮೂಡಿಗೆರೆ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಾವೀರ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‍ಗಳ ಜೊತೆ ಸೂಕ್ತ ರೀತಿಯಲ್ಲಿ ಸಂಪರ್ಕ ಸಾಧಿಸದೇ ಮನಸ್ತಾಪದಿಂದ ಶನಿವಾರ ರಾತ್ರಿ ಮನೆಗೆ ಹಿಂದಿರುಗಿದ್ದರು. ಆಗ ಮನೆಯಲ್ಲಿ ಅವರ ಸಹೋದರ ಪಾರ್ಶ್ವನಾಥ್ ಇರಲಿಲ್ಲ. ನಂತರ ಮನೆಗೆ ಬಂದಾಗ ಮನೆಯಲ್ಲಿ ಮಹಾವೀರ್ ನನ್ನು ಕಂಡು ಯಾಕೆ ಮನೆಗೆ ಬಂದೆ ಎಂದು ಪ್ರಶ್ನಿಸಿದ್ದಾರೆ. ನಂತರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ತಮ್ಮ ಅಣ್ಣನನ್ನೇ ಕೊಚ್ಚಿ ಕೊಲೆಗೈದಿದ್ದಾನೆ.
ಪಾರ್ಶ್ವನಾಥ್ ಮೊದಲು ಮಚ್ಚಿನಿಂದ ಅಣ್ಣನನ್ನ ಹತ್ಯೆ ಮಾಡಲು ಮುಂದಾಗಿದ್ದಾನೆ. ಆಗ ಅಲ್ಲೇ ಇದ್ದ ಅಪ್ಪ-ಅಮ್ಮ ಮಚ್ಚನ್ನು ಕಿತ್ತುಕೊಂಡಿದ್ದಾರೆ. ಬಳಿಕ ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಈ ವೇಳೆ ತಾಯಿ ಕೂಗಾಡಿ ಅಕ್ಕಪಕ್ಕದವರನ್ನು ಕರೆದರೂ ಮಹಾವೀರ್ ಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ಜಗಳ ಬಿಡಿಸಲು ಯಾರೂ ಮುಂದೆ ಬರಲಿಲ್ಲ.
ಕೊರೊನಾ ಗುಣವಾಗದೆ ಮನೆಗೆ ಬಂದಿದ್ದಕ್ಕೆ ಜಗಳ ಪ್ರಾರಂಭವಾಗಿ ನಂತರ ಮಾತಿಗೆ ಮಾತು ಬೆಳೆದು ಈ ದುರ್ಘಟನೆ ಸಂಭವಿಸಿದೆ ಎಂಬ ಮಾತುಗಳು ಹಳ್ಳಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ, ಅಣ್ಣ-ತಮ್ಮನ ಮಧ್ಯೆ ಜಮೀನು ವಿಚಾರದಲ್ಲಿ ಮನಸ್ತಾಪ ಕೂಡ ಇತ್ತು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಕೊಲೆಗೆ ಸೂಕ್ತವಾದ ಕಾರಣ ತಿಳಿದು ಬಂದಿಲ್ಲ. ಆರೋಪಿ ಪಾರ್ಶ್ವನಾಥ್ ನನ್ನು ಕಳಸ ಪೊಲೀಸರು ಬಂಧಿಸಿದ್ದು ವಿಚಾರಣೆಯ ಬಳಿಕ ಸೂಕ್ತ ಕಾರಣ ಗೊತ್ತಾಗಲಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.