ಬೆಂಗಳೂರು: ಚೀನಿ ವೈರಸ್ ಕೋವಿಡ್ 19 ದೇಶ ಅದರಲ್ಲೂ ರಾಜ್ಯವನ್ನು ಒಕ್ಕರಿಸಿದ ಬಳಿಕ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸುತ್ತಿರುವ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಇದಕ್ಕೆ ನಿದರ್ಶನ ಎಂಬಂತೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಬೆಡ್ ಸಿಗದೇ ಕೊನೆಗೆ ಮನೆಯಲ್ಲೇ ನರಳಿ ನರಳಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಪ್ರಾಣಬಿಟ್ಟ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹೌದು. 52 ವರ್ಷದ ಚೋಳರಪಾಳ್ಯದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಭಾನುವಾರ ಮೃತಪಟ್ಟಿದ್ದರು. ಇದಕ್ಕೂ ಮೊದಲು ವ್ಯಕ್ತಿ, ವಿಕ್ಟೋರಿಯಾ ಆಸ್ಪತ್ರೆ ಖಾಸಗಿ ಆಸ್ಪತ್ರೆ ಅಂತ ಅಲೆದಾಡಿದ್ದರೂ ಬೆಡ್ ಸಿಗಲಿಲ್ಲ. ಕೊನೆಗೆ ಮನೆಯಲ್ಲಿಯೇ ಇದ್ದ ಅವರನ್ನು ಮನೆಯವರು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು. ಆದರೆ ಮಂಗಳವಾರ ಮಧ್ಯರಾತ್ರಿ ನರಳಿ ನರಳಿ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ತಿಂಡಿ ಕೊಡಲು ಬಾಗಿಲು ತೆರೆಯದೇ ಇದ್ದಾಗ ಆತಂಕಗೊಂಡ ಮನೆಯವರು, ಬಾಗಿಲು ಒಡೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈಗ ಅಂತ್ಯಸಂಸ್ಕಾರಕ್ಕೂ ತೊಂದರೆಯಾಗಿದ್ದು, ನಿಯಮದ ಪ್ರಕಾರ ಬಿಬಿಎಂಪಿ ಅಧಿಕಾರಿಗಳೇ ಮೃತದೇಹವನ್ನು ಪಡೆದುಕೊಳ್ಳಬೇಕು. ಹೀಗಾಗಿ ಈಗ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಮೃತದೇಹ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.