ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಸೃಷ್ಟಿಯಾಗಿದೆ. ಸರ್ಕಾರಿ ಆಸ್ಪತ್ರೆಗಳು ಮಾತ್ರ ಅಲ್ಲ ಖಾಸಗಿ ಆಸ್ಪತ್ರೆಗಳೂ ಭರ್ತಿಯಾಗಿವೆ. ತುಂಬಾ ಸೀರಿಯಸ್ ಇದೆ ಎಂದು ಗೋಗರೆದ್ರೂ ಬೆಡ್ ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪಾಲಿಕೆ ನೌಕರನ ತಾಯಿಗೂ ಬೆಡ್ ಸಿಗದೆ ಪರದಾಡುವಂತಾಯಿತು.
ವಯಸ್ಸಾದ ತಾಯಿಗೆ ಐಸಿಯು ಬೆಡ್‍ಗಾಗಿ ರಾತ್ರಿಯಿಂದ 50ಕ್ಕೂ ಹೆಚ್ಚು ಬಾರಿ ಫೋನ್ ಮಾಡಿ ಮನವಿ ಮಾಡಿಕೊಂಡ್ರೂ ಬೆಡ್ ಸಿಗಲಿಲ್ಲ. ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿ ಪ್ರಸಾರವಾಗ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಆಗಿದೆ. ಆದರೆ, ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‍ಗಳು ಹೆಚ್ಚಾಗ್ತಿರೋ ಕಾರಣ ಬೆಡ್‍ಗಳ ಸಮಸ್ಯೆ ಶುರುವಾಗಿದೆ ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬೆಡ್ ಎಮರ್ಜೆನ್ಸಿ ಇದೆ ಅನ್ನೋದಕ್ಕೆ ಸಾಲು ಸಾಲು ಸಾಕ್ಷಿ ಕಣ್ಣ ಮುಂದಿದ್ರೂ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಇಲ್ಲ. ಯಾರಿಗೆ ಬೇಕಾದ್ರೂ ನಾನು ಆಸ್ಪತ್ರೆಯಲ್ಲಿ ಬೆಡ್ ಕೊಡಿಸಲಾಗುವುದು ಎಂದಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಅವರು, ಖಾಸಗಿ ಆಸ್ಪತ್ರೆಗಳು ಶೇ.15, ಶೇ.20 ರಷ್ಟು ಮಾತ್ರ ಹಾಸಿಗೆ ಬಿಟ್ಟು ಕೊಟ್ಟಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬೆಡ್ ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿಯಾಗಿದೆ. ಕಳೆದ ವರ್ಷದ ಆದೇಶವನ್ನೇ ಮರು ಅನುಷ್ಠಾನ ಮಾಡಲಾಗಿದೆ.
ಕೊರೋನಾ ಚಿಕಿತ್ಸೆಗೆ ‘ಖಾಸಗಿ’ ದರ
ಜನರಲ್ ವಾರ್ಡ್ : 5,200 ರೂ.
ಆಕ್ಸಿಜನ್ ವಾರ್ಡ್ : 7,000 ರೂ.
ಐಸಿಯು ವಾರ್ಡ್ : 8,500 ರೂ.
ಐಸಿಯು ವಿತ್ ವೆಂಟಿಲೇಟರ್ : 10,000 ರೂ.