ಚಿಕ್ಕಮಗಳೂರು: ಆಸ್ತಿಗಾಗಿ ಮಗನೇ ಹೆತ್ತ ತಂದೆಯನ್ನು ಮನೆಯಿಂದ ಹೊರ ಹಾಕಿದ್ದು, ನಿವೃತ್ತ ಯೋಧ ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಸೂರಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲೇ ಬದುಕುವಂತಾಗಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಮಲಪುರದಲ್ಲಿ ಘಟನೆ ನಡೆದಿದ್ದು, ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಮಪ್ಪ(77) ಅವರು ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಸೂರಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲಿ ಬದುಕುತ್ತಿದ್ದಾರೆ. ರಾಮಪ್ಪ ಅವರು ಕೊಪ್ಪದ ಬಸ್ ನಿಲ್ದಾಣದಲ್ಲಿ ನಿರ್ಗತಿಕನಂತೆ ಬದುಕುತ್ತಿದ್ದು, ತಾವೇ ಕಟ್ಟಿದ ಮನೆಯಲ್ಲಿ ತನಗೇ ಆಶ್ರಯ ಸಿಗದೆ ಕೊಪ್ಪದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಮಲಗುತ್ತಿದ್ದಾರೆ. ಅಲ್ಲದೆ ಸಮೀಪದ ಮುಸುರೇ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿ-ಇಲ್ಲಿ ಊಟ-ತಿಂಡಿ ಮಾಡಿ ದಿನ ದೂಡುತ್ತಿದ್ದಾರೆ.
ಮಾಜಿ ಸೈನಿಕ ರಾಮಪ್ಪ ಅವರು 1965ರ ಪಾಕಿಸ್ತಾನ ಹಾಗೂ 1971ರ ಬಾಂಗ್ಲಾ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ. 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದಾರೆ. ಇಂದು ತನ್ನದೇ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದೆ, ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿದ್ದಾರೆ. ಮಗ ಮನೆಯಿಂದ ಹೊರಹಾಕಿದ ಮೇಲೆ ರಾಮಪ್ಪ ಹರಿಹರಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಬಳಿಕ ಕೊಪ್ಪ ತಹಶೀಲ್ದಾರರಿಗೂ ದೂರು ನೀಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.
ನನ್ನ ಮಗ-ಸೊಸೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನಾನು ಕಟ್ಟಿದ ಮನೆಯಲ್ಲೇ ನನ್ನನ್ನು ಇರಲು ಬಿಡದೆ ಹೊರ ಹಾಕಿದ್ದಾರೆ. ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗೋಗರೆದಿದ್ದಾರೆ. ನನ್ನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹಾರ್ಟ್ ಆಪರೇಶನ್ ಆಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಯವಿಟ್ಟು ನನ್ನ ಮನೆಯನ್ನು ನನಗೆ ಕೊಡಿಸಿ ಎಂದು ತಹಶೀಲ್ದಾರರಿಗೆ ದೂರು ನೀಡಿದ್ದಾರೆ. ಇದು ಸಾಂಸಾರಿಕ ಜಗಳ, ಇಲ್ಲಿ ತಪ್ಪು ನಿವೃತ್ತ ಸೈನಿಕ ರಾಮಪ್ಪರದ್ದೋ ಅಥವಾ ಮಗ ರಾಜಶಂಕರನದ್ದೋ ಗೊತ್ತಿಲ್ಲ. ಆದರೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ಸೈನಿಕನೋರ್ವ ಹೀಗೆ ಮನೆ-ಮಠ, ಊಟ-ತಿಂಡಿ ಇಲ್ಲದೆ ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿರುವುದು ನೋವಿನ ಸಂಗತಿಯಾಗಿದೆ.