ಉಡುಪಿ: ರಾಜ್ಯಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಶೀಘ್ರ ಗುಣಮುಖರಾಗಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ದೇವರ ಮೊರೆ ಹೋಗಿದೆ. ಅನಂತೇಶ್ವರ ದೇವರಿಗೆ, ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಪದಾಧಿಕಾರಿಗಳು ಸದಸ್ಯರು ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಶೀಘ್ರ ಚೇತರಿಕೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ರಾಘವೇಂದ್ರ ಮಠದಲ್ಲಿ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಸುಮಾರು 50 ವರ್ಷಗಳ ಕಾಲ ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಆಸ್ಕರ್ ಫೆರ್ನಾಂಡಿಸ್, ಪಕ್ಷಬೇಧ ಮರೆತು ಕೆಲಸ ಮಾಡಿದವರು. ಜಾತಿ ಮತ ಬೇಧ ರಾಜಕಾರಣವನ್ನು ಹತ್ತಿರವೂ ಸೇರಿಸಿಕೊಂಡವರಲ್ಲ. ಗಾಂಧಿ ಕುಟುಂಬಕ್ಕೆ ಬಹಳ ಹತ್ತಿರ ಇರುವ ಸ್ವಾರ್ಥ ರಹಿತ ಜೀವನ ನಡೆಸುವವರು ಇನ್ನಷ್ಟು ಬಾಳಿ ಬದುಕಬೇಕು ಎಂದು ಅರ್ಚಕರ ಮೂಲಕ ದೇವರಲ್ಲಿ ಕೋರಿಕೊಳ್ಳಲಾಯ್ತು. ಇನ್ನಷ್ಟು ಕಾಲ ಆಸ್ಕರ್ ಅವರ ಸೇವೆ ದೇಶಕ್ಕೆ ಸಿಗಬೇಕು ಎಂದು ನಾಯಕರು ದೇವರಲ್ಲಿ ಪ್ರಾರ್ಥನೆ ಮಾಡಿದರು. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು
ಅಶೋಕ್ ಕುಮಾರ್ ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚಿಂತಾಜನಕವಾಗಿದೆ. ನಾಯಕರ ಆರೋಗ್ಯ ವಿಚಾರಿಸಲು ಮಂಗಳೂರಿಗೆ ಹೋಗುವ ಪರಿಸ್ಥಿತಿ ಈಗ ಇಲ್ಲ. ಕೊರೋನಾ ಕಾರಣ ಎಲ್ಲರನ್ನು ಆಸ್ಪತ್ರೆಯೊಳಗೆ ಬಿಡುತ್ತಿಲ್ಲ. ಚರ್ಚ್ ಮಸೀದಿಯಲ್ಲಿ ಈಗಾಗಲೇ ಪ್ರಾರ್ಥನೆಗಳನ್ನು ಕಾಂಗ್ರೆಸ್ನ ಕಾರ್ಯಕರ್ತರು ಅಭಿಮಾನಿಗಳು ಸಲ್ಲಿಸಿದ್ದಾರೆ. ವಿಶೇಷ ಪೂಜೆ ದೇವರಿಗೆ ನೀಡಿದ್ದೇವೆ. ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೇವೆ. ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿ ಎಂದರು.