ಮುಂಬೈ: ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಇತ್ತೀಚೆಗಷ್ಟೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ನಡುವೆಯೇ ವಿವಾದತ್ಮಾಕ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್‍ಗೆ ಒಳಗಾಗಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಫ್ರಿದಿ ಕಳೆದ 4 ದಿನಗಳ ಹಿಂದಷ್ಟೇ ಚೇತರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಸಂದರ್ಶನ ನೀಡಿದ್ದ ಅಫ್ರಿದಿ, ಭಾರತ ಕ್ರಿಕೆಟಿಗರ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಭಾರತ ಆಟಗಾರರು ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಅಭಿಮಾನಿಗಳು ಅಫ್ರಿದಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಪಾಕ್ ಮತ್ತು ಭಾರತ ನಡುವಿನ ಸಂದಿಗ್ಧ ಪರಿಸ್ಥಿತಿಯ ಕಾರಣದಿಂದ ಎರಡು ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿಲ್ಲ. ಪರಿಣಾಮ ಐಸಿಸಿ ಆಯೋಹಿಸುವ ಟೂರ್ನಿಗಳು ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಮಾತ್ರ ಎರಡು ದೇಶಗಳು ಮುಖಾಮುಖಿಯಾಗುತ್ತಿವೆ. ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ 7 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಆದರೆ ಅಫ್ರಿದಿ ಮಾತ್ರ, ಭಾರತ ಹಲವು ಪಂದ್ಯಗಳಲ್ಲಿ ಸೋಲುಂಡಿದ್ದು, ಒಮ್ಮೆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡ ಬಳಿಕ ಆಟಗಾರರು ತಮ್ಮ ಕ್ಷಮೆ ಕೇಳಿದ್ದರು ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಪಂದ್ಯಗಳನ್ನು ಆಡುವುದನ್ನು ಪಾಕ್ ತಂಡದ ಆಟಗಾರರು ಎಂಜಾಯ್ ಮಾಡುತ್ತಾರೆ. ಹಲವು ಬಾರಿ ನಾವು ಟೀಂ ಇಂಡಿಯಾಗೆ ಸೋಲುಣಿಸಿದ್ದೇವೆ. ಯಾವ ರೀತಿ ಎಂದರೇ? ಒಮ್ಮೆ ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ ಆಟಗಾರರು ಪಂದ್ಯದ ಬಳಿಕ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಅಫ್ರಿದಿ ಸಂದರ್ಶನದಲ್ಲಿ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದಂತೆ ಭಾರತ ಅಭಿಮಾನಿಗಳು ಕ್ರಿಕೆಟ್ ದಾಖಲೆಗಳನ್ನು ಉದಾಹರಣೆಯಾಗಿ ನೀಡುತ್ತಾ ಅಫ್ರಿದಿ ಕಾಲೆಳೆಯಲು ಆರಂಭಿಸಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅಫ್ರಿದಿ 4 ದಿನಗಳ ಹಿಂದೆಯಷ್ಟೇ ಚೇತರಿಸಿಕೊಂಡಿದ್ದರು. ಪರಿಣಾಮ ವೈರಸ್ ಕಾರಣದಿಂದ ಅಫ್ರಿದಿ ಮೆದುಳಿಗೆ ಸಮಸ್ಯೆ ಉಂಟಾಗಿದೆಯೇ? ಆರ್ ಯು ಓಕೆ..ಅಫ್ರಿದಿ? ನಿನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ ಎನಿಸುತ್ತದೆ ಎಂದು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ಭಾರತ, ಪಾಕ್ ವಿರುದ್ಧ ಕಣಕ್ಕಿಗಳಿದಿರುವ ಟೂರ್ನಿಗಳಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದೆ. ಇದುವರೆಗೂ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ 7 ಬಾರಿ ಮುಖಾಮುಖಿಯಾಗಿರುವ ಭಾರತ, ಪಾಕ್ ನಡುವಿನ ಎಲ್ಲಾ ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಪಡೆದಿದೆ. 5 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಒಂದು ಪಂದ್ಯ ಡ್ರಾದೊಂದಿಗೆ ಅಂತ್ಯವಾಗಿದೆ. ಉಳಿದಂತೆ ಎರಡು ದೇಶಗಳ ನಡುವೆ 59 ಟೆಸ್ಟ್ ಕ್ರಿಕೆಟ್ ಪಂದ್ಯಗಳು ನಡೆದಿದ್ದು, ಪಾಕ್ 12, ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಗೆಲುವು ಪಡೆದಿದ್ದು, 38 ಪಂದ್ಯಗಳಲ್ಲಿ ಫಲಿತಾಂಶ ಲಭಿಸಿಲ್ಲ. 132 ಏಕದಿನ ಪಂದ್ಯಗಳಲ್ಲಿ 73 ಪಾಕ್ ಮತ್ತು ಟೀಂ ಇಂಡಿಯಾ 55 ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದ್ದು, 4 ಪಂದ್ಯ ಟೈ ಆಗಿದೆ. 8 ಟಿ20 ಪಂದ್ಯಗಳಲ್ಲಿ ಭಾರತ 6, ಪಾಕ್ ಒಮ್ಮೆ ಮಾತ್ರ ಗೆಲುವು ಪಡೆದಿದ್ದು, 1 ಪಂದ್ಯ ಡ್ರಾಗೊಂಡಿದೆ.