ಚಿಕ್ಕಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಬೆಂಗಳೂರಿನ ಆರ್.ಆರ್ ನಗರವನ್ನ ಕನಕಪುರ ಮಾಡಲು ಹೊರಟಿದ್ದು ಆದರೆ ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 65ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು, ಡಿಕೆಶಿ ಹಾಗೂ ಡಿ.ಕೆ.ಸುರೇಶ್ ಬೆಂಗಳೂರಿನ ಆರ್.ಆರ್ ನಗರದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕನಕಪುರದಲ್ಲಿ ದಬ್ಬಾಳಿಕೆಯಿಂದ ಚುನಾವಣೆ ನಡೆಸುವ ಹಾಗೆ ಆರ್.ಆರ್ ನಗರದ ಉಪ ಚುನಾವಣೆಯನ್ನು ನಡೆಸಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ ಆರ್ ನಗರವನ್ನ ಕನಕಪುರ ಮಾಡಲು ಹೊರಟಿದ್ದು, ಅದು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರವಿರುವ ಪಕ್ಷದ ಅಭ್ಯರ್ಥಿಗೆ ಪ್ರಜ್ಞಾವಂತ ಮತದಾರರು ಮತ ನೀಡಲಿದ್ದಾರೆ ಅಂತ ಹೇಳಿದರು.