ಬೆಂಗಳೂರು: ಹೈವೋಲ್ಟೇಜ್ ಆರ್‍ಆರ್ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ಬಿರುಸು ಪಡೆದುಕೊಳ್ತಿದೆ. ಇದರ ಜೊತೆಗೆ ಪರಸ್ಪರ ವಾಗ್ಬಾಣಗಳೂ ತೀವ್ರಗೊಂಡಿವೆ.
ಆರ್‍ಆರ್ ನಗರ ಕ್ಷೇತ್ರಕ್ಕೆ ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾಯಕರ ಮಧ್ಯೆ ಮಾತಿನ ಬಾಣಗಳೂ ತೀವ್ರಗೊಳ್ಳುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಿಡಿಕಿಡಿಯಾಗಿದ್ದಾರೆ. ಕಾಂಗ್ರೆಸ್ಸಿನಲ್ಲಿದ್ದಾಗ ಈ ರೀತಿ ಮಾತಾಡದಿರುವವರು ಜಾತಿ ಬಗ್ಗೆ ಮಾತಾಡಿ ಸ್ವಾರ್ಥ ತೋರಿದ್ದಾರೆ. ಸಿಎಂ ಆಗ್ತೀನಿ ಅಂತ ಹೇಳಿಕೊಳ್ಳೋರಿಗೆ ಇಂತಹ ಮಾತು ಶೋಭೆ ತರಲ್ಲ ಅಂತ ಮುನಿರತ್ನ ತಿರುಗೇಟು ಕೊಟ್ರು. ಕೆಂಪೇಗೌಡರ ಇತಿಹಾಸ ಓದ್ಕೊಂಡು ರಾಜಕಾರಣ ಮಾಡಲಿ ಅಂತ ಹೇಳಿದ್ರು.
ಜಾಲಹಳ್ಳಿ ಮತ್ತು ಕೊಟ್ಟಿಗೆಪಾಳ್ಯ ವಾರ್ಡ್ ಗಳಲ್ಲಿ ಸಚಿವ ಶ್ರೀರಾಮುಲು ಅವರು ಮುನಿರತ್ನ ಪರ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ್ರು. ಈ ವೇಳೆ ಮಾತಾಡಿದ ಸಚಿವ ಶ್ರೀರಾಮುಲು, ಆರ್ ಆರ್ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರೆ. ತಾವು ಕಲ್ಲುಬಂಡೆ, ಸೋಲಿಲ್ಲದ ಸರದಾರರು ಸಿಎಂ ಆಗೋರು ಅಂತ ಹೇಳಿಕೊಳ್ಳುವ ಡಿಕೆಶಿ ಮತ್ತು ಡಿಕೆಸು ಹೆಸರುಗಳನ್ನು ಕ್ಷೇತ್ರದ ಜನ ಕಳಚಿ ಹಾಕ್ತಾರೆ ಎಂದು ತಿವಿದ್ರು.
ಹೆಚ್‍ಎಂಟಿ ವಾರ್ಡ್‍ನಲ್ಲಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳ ಜೊತೆ ಮುನಿರತ್ನ ಸಭೆ ನಡೆಸಿದ್ರು. ಬಳಿಕ ಲಗ್ಗೆರೆಯಲ್ಲಿ ಪ್ರಚಾರ ಕಾರ್ಯ ಮುಂದುವರೆಸಿದ್ರು. ಈ ಮಧ್ಯೆ ವಾರ್ಡ್ ಮಟ್ಟದ ಮುಖಂಡರ, ಕಾರ್ಯಕರ್ತರ ಸಭೆ ನಡೆಸಿದ್ರು.