ಉಡುಪಿ: ಸಶಸ್ತ್ರ ಮೀಸಲುಪಡೆಯ ಆರ್‌ಎಸ್‌ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಆಗಿದ್ದ ಕಲಬುರಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ (56) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಮಲ್ಲಿಕಾರ್ಜುನ ಗುಬ್ಬಿ ಮೂಲತಃ ಕಲಬುರಗಿಯವರಾಗಿದ್ದು, ಉಡುಪಿ ಜಿಲ್ಲೆಯ ನಕ್ಸಲ್ ಬಾಧಿತ ಅಮಾಸೆಬೈಲು ಠಾಣಾ ಭದ್ರತೆಗಾಗಿ ನಿಯೋಜನೆಗೊಂಡಿದ್ದರು.
Advertisement
Advertisement
ಸುಮಾರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ, ಕಳೆದ ಮೂರು ತಿಂಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಮುನಿರಾಬಾದ್‍ಗೆ ವರ್ಗಾವಣೆಗೊಂಡಿದ್ದರು. ಕೆಎಸ್‌ಆರ್‌ಪಿಯ ಆರ್‌ಎಸ್‌ಐ ಆಗಿದ್ದ ಮಲ್ಲಿಕಾರ್ಜುನ್ ಅವರು ಅಮಾಸೆಬೈಲು ಠಾಣಾ ಭದ್ರತೆಗಾಗಿ ಮೇ 16ರಂದು ನಿಯೋಜನೆಗೊಂಡಿದ್ದರು. 15 ದಿನಗಳ ಕರ್ತವ್ಯ ಪೂರೈಸಿ ಶನಿವಾರ ಇಲ್ಲಿಂದ ಬಿಡುಗಡೆಯಾಗುವವರಿದ್ದರು. ಈ ಮಧ್ಯೆ ಗುರುವಾರ ರಾತ್ರಿ ಊಟ ಮುಗಿಸಿ ಪೊಲೀಸ್ ವಸತಿಗೃಹಲ್ಲಿ ಮಲಗಿದ್ದ ಮಲ್ಲಿಕಾರ್ಜುನ್, ಇಂದು ಬೆಳಗ್ಗೆ ಅಲ್ಲಿರಲಿಲ್ಲ.
Advertisement
ತಕ್ಷಣ ಉಳಿದ ಪೊಲೀಸ್ ಸಿಬ್ಬಂದಿ ಸೇರಿ ಹುಡುಕಿದರೂ ಅವರ ಪತ್ತೆಯಾಗಿರಲಿಲ್ಲ. ಬಳಿಕ ಠಾಣೆಯ ಸಮೀಪದ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಕಂಡುಬಂದಿದೆ. ಕೆಲ ತಿಂಗಳಿಂದ ಹೊಟ್ಟೆ ಮತ್ತು ತಲೆ ನೋವಿಂದ ಅವರು ಕುಗ್ಗಿ ಹೋಗಿದ್ದರು ಎಂದು ಸಹ ಸಿಬ್ಬಂದಿ ಹೇಳಿದ್ದಾರೆ. ಆದರೆ ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.