ಹೈದರಾಬಾದ್: ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯೊಬ್ಬಳು ತನ್ನ 2 ತಿಂಗಳ ಮುಗ್ಧ ಕಂದಮ್ಮನನ್ನು 45 ಸಾವಿರ ರೂ. ಗೆ ಮಾರಾಟ ಮಾಡಿದ್ದಾಳೆ. ಈ ಘಟನೆ ಹೈದರಾಬಾದ್‍ನ ಸುಭಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯನ್ನು ಝೋಯಾ ಖಾನ್ ಎಂದು ಗುರುತಿಸಲಾಗಿದೆ. ಆಯೆಷಾ ಜಬೀನ್, ಶಮೀಮಾ ಬೇಗಂ ಹಾಗೂ ಸಿರಾಜ್ ಬೇಗಂ ಇತರ ಆರೋಪಿಗಳಾಗಿದ್ದಾರೆ. ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ಮಗುವನ್ನು ಮಾರಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ತಮ್ಮ ಮಗುವನ್ನು ಮೊಹಮ್ಮದ್ ಹಾಗೂ ತಬಸ್ಸುಮ್ ಬೇಗಂಗೆ 45 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಎಂದು ದೂರಿದ್ದಾನೆ.
ದೂರು ದಾಖಲಾಗುತ್ತಿದ್ದಂತೆಯೇ ಪೊಲಿಸರು ಮಹಿಳೆ ಝೋಯಾ ಖಾನ್ ನನ್ನು ವಶಕ್ಕೆ ಪಡೆದುಕೊಂಡರು. ತನಿಖೆ ನಡೆಸದಿ ವೇಳೆ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಗಸ್ಟ್ 3ರಂದು ಮುಜಾಹೇದ್ ತನ್ನ ಪತ್ನಿಯೊದಿಗೆ ಜಗಳವಾಡಿ ಹೆತ್ತವರ ಮನೆಗೆ ತೆರಳಿದ್ದನು. ತನ್ನ ಪತಿಯ ವರ್ತನೆಯಿಂದ ಬೇಸರಗೊಂಡ ಝೋಯಾಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಹೀಗಾಗಿ ಆಲೆ ಮಗುವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ. ಅಲ್ಲದೆ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ತನ್ನ 2 ತಿಂಗಳ ಮಗನನ್ನು ಮಾರಾಟ ಮಾಡಲು ಬಯಸಿದ್ದಾಗಿ ಪೊಲೀಸರ ಬಳಿ ತಿಳಿಸಿದ್ದಾಳೆ.
ಮಗುವನ್ನು 45 ಸಾವಿರಕ್ಕೆ ಮಾರಾಲು ಒಪ್ಪಿಕೊಂಡ ಝೋಯಾ, ಅದರಂತೆ ಆಗಸ್ಟ್ ಮೊದಲ ವಾರದಲ್ಲಿ ಮಗುವನ್ನು ವ್ಯಕ್ತಿಗೆ ನೀಡಿದ್ದಾಳೆ. ಇತ್ತ ಆಗಸ್ಟ್ 8 ರಂದು ಹೆತ್ತವರ ಮನೆಯಿಂದ ಬಂದ ಪತಿ ಮಗು ಎಲ್ಲಿ ಎಂದು ಕೇಳಿದ್ದಾನೆ. ಈ ವೇಳೆ ಆಕೆ, ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ, ಮಗುವಿನ ಹುಡುಕಾಟ ಶುರುಮಾಡದನು. ಎಲ್ಲೂ ಸಿಗದ ನಂತರ ಆತ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ದೂರಿನ ಮೇರೆಗೆ ಪೊಲಿಸರು ಚಂಚಲಗುಡದಲ್ಲಿರುವ ಆಯೆಷಾ ಮನೆಗೆ ತೆರಳಿ ಮಗುವನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇತರ ಆರೋಪಿಗಳೊಂದಿಗೆ ಮಹಿಳೆಯನ್ನು ಬಂಧಿಸಲಾಗಿದ್ದು, ಮಗುವನ್ನು ರಕ್ಷಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.