ಚಂಡೀಗಢ: ಲಾಕ್‍ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಅಮ್ಮ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.
ಮೃತರನ್ನು ಕೃಷ್ಣದೇವಿ (65) ಮತ್ತು ಆಕೆಯ ಮಗ ಮನೀಶ್ ವರ್ಮಾ (35) ಎಂದು ಗುರುತಿಸಲಾಗಿದೆ. ಇಬ್ಬರೂ ದಾಬಾದ ಸದ್ಗುರ ನಗರದ ತಮ್ಮ ನಿವಾಸದಲ್ಲಿ ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮೃತ ಮನೀಶ್ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಮನೀಶ್‍ಗೆ ಮನೆ ಬಾಡಿಗೆ ಕೊಟ್ಟ ಮಾಲೀಕರು ಕಿಟಕಿ ತೆಗೆದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಬಾಗಿಲೂ ತೆರೆದಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡ ಮನೆಯ ಮಾಲೀಕ ಮನೆಯ ಕಿಟಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗ ಇಬ್ಬರು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡಿದೆ. ಆಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಪವಿತರ್ ಸಿಂಗ್, ಆತ್ಯಹತ್ಯೆ ಮಾಡಿಕೊಂಡ ಜಾಗದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮೃತ ಅಮ್ಮ-ಮಗ ಕಳೆದ ಎರಡು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದು ಬಂದಿದೆ. ಮನೀಶ್ ಅವರ ಪತಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಂತರ ಅವರು ತಮ್ಮ ಪೋಷಕರ ಮನೆಗೆ ಹೋಗಿ ಅಲ್ಲೇ ತೀರಿಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಲಾಕ್‍ಡೌನ್ ವೇಳೆ ಕೆಲಸವನ್ನು ಕಳೆದುಕೊಂಡ ಮನೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೊತೆಗೆ ಇತ್ತೀಚೆಗೆ ಹೆಂಡತಿ ಕೂಡ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರಿಂದ ಮನೀಶ್ ಖಿನ್ನತೆಗೆ ಒಳಾಗಿದ್ದ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.