ಯಾದಗಿರಿ: ಆರೋಗ್ಯ ಉಪಕೇಂದ್ರದ ಮೇಲ್ಛಾವಣಿ ಏಕಾಏಕಿ ಕುಸಿತಗೊಂಡು ಇಬ್ಬರು ಆರೋಗ್ಯ ಸಿಬ್ಬಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರದ ಕಟ್ಟಡ ಸುಮಾರು 40 ವರ್ಷದ ಹಳೆಯದಾಗಿದ್ದು, ಅದರಲ್ಲೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ರಿಪೇರಿ ಮಾಡಿಸುವಂತೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ಸಿಬ್ಬಂದಿ ತಂದಿದ್ದರೂ ಪ್ರಯೋಜವಾಗಿರಲಿಲ್ಲ. ಆದರೆ ಇಂದು ಕುಸಿತಕ್ಕೊಳಗಾಗಿ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಿಷಯುಕ್ತ ತ್ಯಾಜ್ಯ ನದಿಗಳಿಗೆ ಹರಿಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ
ಇಂದು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಾಗೇಶ್ ಹಾಗೂ ಸುನೀತಾ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿತಗೊಂಡಿದೆ. ಸಕಾಲಕ್ಕೆ ಸ್ಥಳೀಯರು ಬಂದು ಇಬ್ಬರನ್ನೂ ಕಾಪಾಡಿದ್ದಾರೆ. ಇಬ್ಬರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂದಲೆಳೆಯ ಅಂತರದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.