ಯಾದಗಿರಿ: ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಂಡಕ್ಕೆ ಹಾರಿ ಶವಗಳನ್ನು ತೆಗೆಯುವ ಮೂಲಕ ಸಹಾಯ ಮಾಡಿದ ವ್ಯಕ್ತಿಗೆ ಇಂದು ಗೌರವ ಸಲ್ಲಿಸಲಾಯಿತು.
ಹೌದು. ಶಹಪೂರ ತಾಲೂಕಿನ ದೋರನಹಳ್ಳಿಯಲ್ಲಿ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಗ್ರಾಮದ ಹಳ್ಳೆಪ್ಪ ಎಂಬವರು ಕೃಷಿ ಹೊಂಡದಲ್ಲಿ ಈಜಾಡಿ ಮೃತರ ಶವಗಳನ್ನು ನೀರಿನಿಂದ ಹೊರತೆಗೆದು ಶೌರ್ಯ ಮತ್ತು ಮಾನವೀಯತೆ ಮೆರೆದಿದ್ದರು. ಇದೀಗ ಹಳ್ಳೆಪ್ಪ ಅವರಿಗೆ ಯಾದಗಿರಿ ಪೊಲೀಸ್ ಇಲಾಖೆ ಗೌರವ ನೀಡಿದೆ.
ಜೂನ್ 28ರಂದು ದೋರನಹಳ್ಳಿಯಲ್ಲಿ ಭೀಮರಾಯ ಎಂಬವರು ಸಾಲದ ಹೊರೆಯಿಂದ ತನ್ನ ನಾಲ್ಕು ಜನ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ಬಳಿಕ ಹೆಂಡತಿಯ ಜೊತೆಗೆ ತಾನು ಸಹ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕೃಷಿ ಹೊಂಡದಲ್ಲಿ ಶವಗಳನ್ನು ಹೊರ ತೆಗೆಯಲು ಹಳ್ಳೆಪ್ಪ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಬಹಳಷ್ಟು ಸಹಾಯ ಮಾಡಿದ್ದರು.
ಸ್ವತಃ ಈಜುಗಾರರಾಗಿರುವ ಹಳ್ಳೆಪ್ಪ ಹೊಂಡದಲ್ಲಿನ ಎಲ್ಲಾ ಶವಗಳನ್ನು ಹೊರೆತೆಗೆದಿದ್ದರು. ಹೀಗಾಗಿ ಯಾದಗಿರಿ ಎಸ್ಪಿ ವೇದಮೂರ್ತಿ ಇಂದು ತಮ್ಮ ಕಚೇರಿಗೆ ಕರೆದು ಹಳ್ಳೆಪ್ಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.