ಆರಂಭದಲ್ಲಿ 30 ಕೋಟಿ, 1 ಸೆಷನ್‌ನಲ್ಲಿ 100 ಮಂದಿಗೆ ಲಸಿಕೆ – ಮೊದಲು ಯಾರಿಗೆ ಸಿಗಲಿದೆ ಲಸಿಕೆ?

Public TV
3 Min Read
coronavirus vaccine Serum Institute COVID 19

– ವಿತರಣೆ ಕೇಂದ್ರದಲ್ಲಿ ಇರಲಿದ್ದಾರೆ ಐವರು ಅಧಿಕಾರಿಗಳು
– ಕೇಂದ್ರದಿಂದ ಮಾರ್ಗದರ್ಶಿ ಸೂತ್ರ ಬಿಡುಗಡೆ

ನವದೆಹಲಿ: ಕೆಲ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಲಸಿಕೆ ಹಂಚಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಂದು ಸೆಷನ್‌ನಲ್ಲಿ 100 ಮಂದಿ ಲಸಿಕೆ ನೀಡಬೇಕು ಎಂದು ಹೇಳಿದೆ.

ಲಸಿಕೆ ವಿತರಿಸುವ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಈ ಸೂತ್ರದ ಪ್ರಕಾರ 1 ʼಸೆಷನ್‌ʼನಲ್ಲಿ 100 ಮಂದಿಗೆ ಲಸಿಕೆ ವಿತರಣೆ ಮಾಡಬೇಕು ಎಂದು ಹೇಳಿದೆ. ಆರಂಭದಲ್ಲಿ ಒಟ್ಟು 60 ಕೋಟಿ ಲಸಿಕೆಯನ್ನು ಕೋಲ್ಡ್‌ ಚೈನ್‌ ಮೂಲಕ 30 ಕೋಟಿ ಜನರಿಗೆ ವಿತರಣೆ ಮಾಡುವ ಗುರಿಯನ್ನು ಹಾಕಲಾಗಿದೆ.

COVID 19 vaccine

ಮಾಧ್ಯಮಕ್ಕೆ ನೀತಿ ಆಯೋಗದ ಸದಸ್ಯ ವಿಕೆ ಪೌಲ್‌ ಪ್ರತಿಕ್ರಿಯಿಸಿ, 30 ಕೋಟಿ ಜನರ ಪೈಕಿ 50 ವರ್ಷ ಮೇಲ್ಪಟ್ಟ 26 ಕೋಟಿ ಜನ, 50 ವರ್ಷ ಒಳಗಡೆ ಇರುವ 1 ಕೋಟಿ ಕೋ ಮಾರ್ಬಿಡ್‌(ಕಿಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹ ಇತ್ಯಾದಿ ಸಮಸ್ಯೆಗಳು ಇರುವ ರೋಗಿಗಳು) ಜನ ಮತ್ತು 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರ ಸದ್ಯಕ್ಕೆ ಫೈಝರ್‌, ಆಸ್ಟ್ರಾಜೆನಿಕಾ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗಳ ಜೊತೆ ಲಸಿಕೆ ಸಂಬಂಧ ಮಾತುಕತೆ ನಡೆಸಿದೆ. ಈ ಪೈಕಿ ಫೈಝರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಭಾರತದಲ್ಲಿ ಫೈಝರ್‌ ಲಸಿಕೆ ವಿತರಿಸುವುದು ಬಹಳ ಸವಾಲಿನ ಕೆಲಸವಾಗಿರುವ ಕಾರಣ ಕೇಂದ್ರ ಸರ್ಕಾರ ಆಸ್ಟ್ರಾಜೆನಿಕಾ, ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಯ ಕೊವಾಕ್ಸಿನ್‌ ಲಸಿಕೆಯತ್ತ ಹೆಚ್ಚಿನ ಗಮನಹರಿಸಿದೆ.  ಇದನ್ನೂ ಓದಿ: 250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

coprona vaccine

ಲಸಿಕೆ ವಿತರಣೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳಲು ರಾಷ್ಟ್ರೀಯ ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಈಗಾಗಲೇ ನೇಮಿಸಿದೆ. ಆ ಸಮಿತಿಯು 112 ಪುಟಗಳ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದ್ದು, ಅದನ್ನು ಕೇಂದ್ರ ಗೃಹ ಇಲಾಖೆ ಶನಿವಾರ ಬಿಡುಗಡೆ ಮಾಡಿದೆ.

ಮಾರ್ಗದರ್ಶಿ ಸೂತ್ರದಲ್ಲಿ ಏನಿದೆ?
ಲಸಿಕೆ ವಿತರಣೆ ಮಾಡುವ ಕೇಂದ್ರಗಳ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‌ ಮತ್ತು 8 ಡಿಗ್ರಿ ಸೆಲ್ಸಿಯಸ್‌ ಮಧ್ಯೆ ಇರಬೇಕಾಗುತ್ತದೆ. ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಕೇಂದ್ರದಲ್ಲಿ ಸಾಕಷ್ಟು ವ್ಯವಸ್ಥೆಯಿದ್ದರೆ ಒಂದು ‘ಸೆಷನ್‌’ನಲ್ಲಿ 200 ಜನರಿಗೂ ಲಸಿಕೆ ನೀಡಬಹುದು.

ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಲಸಿಕೆ ನೀಡಬೇಕು ಎಂದು ಹೇಳಿದ್ದರೂ ಒಂದು ಸೆಷನ್‌ ಅಂದರೆ ಒಂದು ದಿನವೇ ಅಥವಾ ನಿರ್ಧಿಷ್ಟ ಗಂಟೆಯೋ ಎಂಬದುನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

vaccine hyderabad 2

ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೊರೊನಾ ಯೋಧರಿಗೆ ನಿರ್ದಿಷ್ಟ ಕೇಂದ್ರದಲ್ಲೇ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವ ಎಲ್ಲಾ ಕೇಂದ್ರದಲ್ಲಿ ಕಡ್ಡಾಯವಾಗಿ 5 ಸಿಬ್ಬಂದಿಯಿರಬೇಕು. ಹೈ ರಿಸ್ಕ್‌ ವರ್ಗದ ಜನರಿಗೆ ಲಸಿಕೆ ನೀಡಲು ಬೇರೆ ಬೇರೆ ಕಡೆ ಕೇಂದ್ರಗಳನ್ನು ತೆರೆಯಬೇಕಾಗಿ ಬರಬಹುದು ಅಥವಾ ಮೊಬೈಲ್‌ ಕೇಂದ್ರಗಳನ್ನು ಸ್ಥಾಪಿಸಬೇಕಾಗಬಹುದು ಎಂದು ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.

ಆ 5 ಮಂದಿ ಯಾರು?
ಇಂಜೆಕ್ಷನ್‌ ನೀಡುವ ಕಾನೂನುಬದ್ಧ ಅಧಿಕಾರ ಹೊಂದಿರುವ ಡಾಕ್ಟರ್‌, ನರ್ಸ್‌ ಅಥವಾ ಫಾರ್ಮಸಿಸ್ಟ್‌ ಮುಖ್ಯ ಅಧಿಕಾರಿ ಆಗಿರುತ್ತಾರೆ. ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ವ್ಯಕ್ತಿ ಎರಡನೇ ಅಧಿಕಾರಿಯಾಗಿರುತ್ತಾರೆ. ಇವರು ಕೇಂದ್ರದ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸಿ ಲಸಿಕೆಗೆ ನೋಂದಣಿಯಾದ ಹೆಸರುಗಳನ್ನು ಪರಿಶೀಲಿಸಬೇಕು.

ಲಸಿಕೆ ಹಾಕಿಸಲು ಬರುವ ಜನರ ದಾಖಲೆಯನ್ನು ಮೂರನೇ ಅಧಿಕಾರಿ ಪರಿಶೀಲಿಸಬೇಕು. ಲಸಿಕಾ ಕೇಂದ್ರದಲ್ಲಿ ಜನದಟ್ಟಣೆ ನಿರ್ವಹಣೆ ಹಾಗೂ ಸಂವಹನ ಮಾಡಲು ನಾಲ್ಕು ಮತ್ತು ಐದನೇ ಅಧಿಕಾರಿ ಸಹಕರಿಸಬೇಕು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.‌

coronavirus covid19 vaccine l

Share This Article
Leave a Comment

Leave a Reply

Your email address will not be published. Required fields are marked *