ಮುಂಬೈ: ಬಾಲಿವುಡ್‍ನಲ್ಲಿ ಕ್ವೀನ್ ಎಂದೇ ಕರೆಸಿಕೊಳ್ಳುವ ಕಂಗನಾ ರಣಾವತ್ ಯಾವುದೇ ಗಾಡ್ ಫಾದರ್ ಇಲ್ಲದೇ ಸ್ಟಾರ್ ಆಗಿ ಬೆಳೆದವರು. ಆದರೆ ಇದೇ ಕಂಗನಾ ಒಂದು ಕಾಲದಲ್ಲಿ ಹಾಕಿಕೊಳ್ಳಲು ಬಟ್ಟೆ ತೆಗೆದುಕೊಳ್ಳಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಜೀವನ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ನಟಿ ಕಂಗನಾ ತನ್ನ ನೇರಮಾತು ಡ್ಯಾಶಿಂಗ್ ಸ್ವಾಭಾವದ ಮೂಲಕ ಕಲರ್ ಫುಲ್ ಲೋಕ ಬಾಲಿವುಡ್‍ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ನಟ ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲೂ ತನ್ನ ನೇರನುಡಿಯ ಮೂಲಕ ಸುದ್ದಿಯಾಗಿದ್ದ ಕಂಗನಾ, ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಈಗ ಖಾಸಗಿ ವಾಹಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ತನ್ನ ಕಷ್ಟದ ದಿನಗಳನ್ನು ನೆನದುಕೊಂಡಿದ್ದಾರೆ. ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಂಗನಾ, ಕನಸು ಕಂಡಿದ್ದು ಮಾತ್ರ ಬಾಲಿವುಡ್‍ನಲ್ಲಿ ರಾಣಿಯಾಗಬೇಕೆಂದು. ಆದರೆ ಬಾಲಿವುಡ್ ಎಂಬ ಸಮುದ್ರದಲ್ಲಿ ಯಾರ ಸಹಾಯವಿಲ್ಲದೇ ಅಲೆಗಳ ಎದುರು ಈಜುವುದು ಅಷ್ಟು ಸುಲಭವಾಗಿ ಇರಲಿಲ್ಲ. ಆ ದಿನವೇ ಕಂಗನಾ ನನಗೆ 50 ವರ್ಷ ತುಂಬುವುದರ ಒಳಗೆ ದೇಶದ ಶ್ರೀಮಂತರಲ್ಲಿ ಒಬ್ಬಳಗಿರಬೇಕು ಎಂದು ಕನಸು ಕಂಡಿದ್ದೆ ಎಂದು ಹೇಳಿದ್ದಾರೆ.
ಬಹಳ ಕಷ್ಟಗಳ ನಡುವೆ ಬಾಲಿವುಡ್‍ಗೆ ಬಂದ ಕಂಗನಾ, ಮೊದಲ ಬಾರಿಗೆ 2006ರಲ್ಲಿ ಬಿಡುಗಡೆಯಾದ ಗ್ಯಾಂಗ್‍ಸ್ಟಾರ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಮಯದಲ್ಲಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗಲು ನನ್ನು ಬಳಿ ಬಟ್ಟೆ ತೆಗದುಕೊಳ್ಳಲು ಹಣವಿಲ್ಲದೇ ಬಹಳ ಯೋಚನೆ ಮಾಡಿದ್ದೆ. ಆಗ ನನ್ನ ಫ್ಯಾಷನ್ ಡಿಸೈನರ್ ಆಗಿದ್ದ ರಿಕ್ ರಾಯ್ ನನಗೆ ಬಟ್ಟೆಗಳನ್ನು ವಿನ್ಯಾಸ ಮಾಡಿ ಕೊಟ್ಟಿದ್ದರು ಎಂದು ಕಂಗನಾ ತಿಳಿಸಿದ್ದಾರೆ.
ಕಂಗನಾ ರಣಾವತ್ ಅವರು, 1987 ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸೂರಜ್‍ಪುರದಲ್ಲಿ ಒಂದು ಮಧ್ಯದ ವರ್ಗದ ಕುಟುಂಬದಲ್ಲಿ ಜನಿಸಿದರು. ತಾಯಿ ಆಶಾ ರಣಾವತ್ ಅವರು ಶಾಲಾ ಶಿಕ್ಷಕಿಯಾಗಿದ್ದರು. ತಂದೆ ಅಮರ್ ದೀಪ್ ರಣಾವತ್ ಅವರು ವ್ಯಾಪಾರಿಯಾಗಿದ್ದರು. ಈ ದಂಪತಿಯ ಮೊದಲ ಮಗಳಾದ ಕಂಗನಾ ಯಾವುದೇ ಸಹಾಯವಿಲ್ಲದೇ ಬಾಲಿವುಡ್‍ನಲ್ಲಿ ಬೆಳೆದು ಇಂದು ತಮ್ಮ ಸಿನಿಮಾವನ್ನು ತಾನೇ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದಾರೆ.
ಸದ್ಯ ಕಂಗನಾ ಅವರು ಸಾಲು ಸಾಲು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ತಲೈವಿ, ಧಾಖಡ್, ತೇಜಸ್ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಅವರು ಕೊನೆಯದಾಗಿ ಪಂಗ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಾಲಿವುಡ್ ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂಬ ಆರೋಪ ಮಾಡಿದ್ದರು.