-ಕುಲಪತಿ ನೇಮಕ ಕುರಿತು ರಾಜ್ಯಪಾಲರೊಂದಿಗೆ ಚರ್ಚೆ
– ನಾನು ಮಂತ್ರಿಯಾಗಿರುವವರೆಗೂ ಅಪವಾದ ಹೊತ್ತುವರು ಕುಲಪತಿಯಾಗಲು ಸಾಧ್ಯವಿಲ್ಲ
ಬೆಂಗಳೂರು: ರೋಗ ಬಾರದಂತೆ ತಡೆಯುವ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆಗಳನ್ನು ನಡೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
Advertisement
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಲೋಪತಿಯಲ್ಲಿ ಸಂಶೋಧನೆಗಳನ್ನು ಮಾಡುವಂತೆ ಆಯುರ್ವೇದದಲ್ಲೂ ಹೆಚ್ಚು ಸಂಶೋಧನೆಗಳು ನಡೆಯಬೇಕು. ಎಷ್ಟೇ ನಂಬಿಕೆ ಇದ್ದರೂ ಅದನ್ನು ಸಾಕ್ಷಿ ಸಮೇತ ನಿರೂಪಿಸಬೇಕು. ಸಂಶೋಧನೆ ಮತ್ತು ಆವಿಷ್ಕಾರವನ್ನು ಹೆಚ್ಚಾಗಿ ಮಾಡಬೇಕು. ಪ್ರತಿ ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಸಂಶೋಧನೆಗಳನ್ನು ಹೆಚ್ಚಿಸಬೇಕಿದೆ. ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸಂಶೋಧನೆ ಅಗತ್ಯ ಎಂದರು.
Advertisement
Advertisement
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೋವಿಡ್ ಲಸಿಕೆ ತಯಾರಿಸಿದೆ. ಅದೇ ರೀತಿ, ರಾಜೀವ್ ಗಾಂಧಿ ವಿವಿ ಕೂಡ ಯಾವುದೇ ರೋಗಗಳಿಗೆ ಪರಿಹಾರ ಕಂಡು ಹಿಡಿಯುವಂತೆ ಸಂಶೋಧನೆ ನಡೆಸಬೇಕು. ಎನ್‍ಸಿಡಿ ಸಮಸ್ಯೆಯಿಂದಾಗಿ ಬಡ ರಾಷ್ಟ್ರಗಳಲ್ಲಿ ವಾರ್ಷಿಕ 28 ದಶಲಕ್ಷ ಜನರು ಮೃತರಾಗುತ್ತಿದ್ದಾರೆ. ಭಾರತದಲ್ಲಿ ಕೂಡ ಈ ಸಮಸ್ಯೆ ಹೆಚ್ಚಿದೆ. ಈ ರೋಗಗಳಿಗೆ ಆಯುರ್ವೇದ ಪದ್ಧತಿ ಹೆಚ್ಚು ಪರಿಹಾರ ನೀಡುತ್ತದೆ ಎಂದು ತಿಳಿಸಿದರು.
Advertisement
ರಾಜ್ಯಪಾಲರೊಂದಿಗೆ ಚರ್ಚೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚಿಸಬೇಕಾಗಿತ್ತು. ಆದರೆ ಕೋವಿಡ್ ನಿಂದಾಗಿ ರಾಜ್ಯಪಾಲರು ಚರ್ಚೆ ನಡೆಸಲು ಆಗಿಲ್ಲ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ರಾಜ್ಯಪಾಲರ ಭೇಟಿಗೆ ಸಮಯ ಕೇಳಿ ನಂತರ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಅವರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಶುದ್ಧ ಚಾರಿತ್ರ್ಯವಿರುವವರು ಕುಲಪತಿಯಾಗಲು ಸಾಧ್ಯ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ತುಂಬುವ ಬಗ್ಗೆ ಚರ್ಚಿಸಲಾಗುವುದು. ಈ ಸ್ಥಾನಕ್ಕೆ ಯಾವ ರೀತಿಯ ಸಂಸ್ಕಾರ, ಯಾವ ರೀತಿಯ ಶೈಕ್ಷಣಿಕ ಅರ್ಹತೆ ಇರುವ ಉತ್ತಮರನ್ನು ತರಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇದೆ. ಆ ನಿಟ್ಟಿನಲ್ಲಿ ಸ್ಥಾನ ತುಂಬಬೇಕೆಂಬುದನ್ನು ರಾಜ್ಯಪಾಲರ ಗಮನಕ್ಕೆ ತರಲಾಗುವುದು. ಅನುಮಾನಕ್ಕೂ ಅವಕಾಶವಿಲ್ಲದ ಶುದ್ಧ ಚಾರಿತ್ರ್ಯವಿರುವ ವ್ಯಕ್ತಿ ಮಾತ್ರ ಕುಲಪತಿಯಾಗಲು ಯೋಗ್ಯವೇ ಹೊರತು ಯಾವುದೇ ಅಪವಾದ ಹೊತ್ತುಕೊಂಡವರು ಕುಲಪತಿ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ. ಕನಿಷ್ಠಪಕ್ಷ ನಾನು ಸಚಿವನಾಗಿರುವವರೆಗೂ ಅದು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ರಾಂಡಮ್ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಅನ್ ಲಾಕ್ ಹಂತದಲ್ಲೇ ಬಹಳಷ್ಟು ಜನರು ಹೊರಗೆ ಓಡಾಡುತ್ತಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮಾಲ್, ಥಿಯೇಟರ್, ಹೋಟೆಲ್ ಎಲ್ಲವನ್ನೂ ತೆರೆಯಲು ಅವಕಾಶ ನೀಡಿಲ್ಲ. ಆದರೂ ಕೈಗಾರಿಕೆಗೆ ಅವಕಾಶ ನೀಡಿರುವುದರಿಂದ ಜನರು ಹೊರಗೆ ಓಡಾಡುತ್ತಿರಬಹುದು. ಇದಕ್ಕೆ ಪೂರಕವಾಗಿ ಪರೀಕ್ಷೆ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದರು.
ರಾಜ್ಯದಲ್ಲಿ ಕೋವಿಡ್ ನಿಂದ 25 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. 1.70 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡಲಾಗಿರುತ್ತದೆ. ಕೋವಿಡ್ ಮೂರನೇ ಅಲೆಗೆ ಸಿದ್ಧತೆಯಾಗಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ವಿಭಾಗ ಬಲಪಡಿಸಲಾಗುತ್ತಿದೆ. 1,763 ವೈದ್ಯರು, ವೈದ್ಯಾಧಿಕಾರಿಗಳನ್ನು ಐತಿಹಾಸಿಕದಂತೆ ಅತಿ ಕಡಿಮೆ ಅವಧಿಯಲ್ಲಿ ನೇಮಿಸಲಾಗಿದೆ. ವೈದ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಕಡಿಮೆ. ವೈದ್ಯರು ನಗರಗಳಲ್ಲೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಚ್ಚಿನ ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡುವ ಛಲ ಹೊಂದಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಬಾವಿ ಪಾಲಾದ ಕಾರು