ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ

Public TV
3 Min Read
hdk

ಬೆಂಗಳೂರು: ರಾಜ್ಯ ಸರ್ಕಾರ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವುದಕ್ಕೆ ಏದುಸಿರು ಬಿಡುತ್ತಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಕೊರೊನಾ ಹಾಟ್‍ಸ್ಪಾಟ್ ಆಗಿರುವ ಬೆಂಗಳೂರು ನಗರದಲ್ಲಿ ಆಮ್ಲಜನರ ಪೂರೈಕೆ ಸಮಸ್ಯೆ ಎದುರಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಎಚ್‍ಡಿಕೆ ಅವರು, ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ ಎಂದಿದ್ದಾರೆ. ಅಲ್ಲದೇ ಈಗ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸರಣಿ ಟ್ವೀಟ್ ಮಾಡಿ ಸರ್ಕಾರದ ವೈಫಲ್ಯಗಳಿಗೆ ಸಲಹೆ ನೀಡಿರುವ ಎಚ್‍ಡಿಕೆ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

ರಾಜ್ಯದಲ್ಲಿ ವಾಡಿಕೆಗಿಂತ ಈ ಬಾರಿ ಶೇಕಡ 25 ರಷ್ಟು ಹೆಚ್ಚು ಬಿತ್ತನೆಯಾಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಹೊತ್ತಲ್ಲೇ ಬೆಂಗ್ಳೂರಲ್ಲಿ ಹೊಸ ಪ್ರಾಬ್ಲಂ – ಉಸಿರಾಟ ತೊಂದರೆ ಇರೋರಿಗೆ ಆಕ್ಸಿಜನ್ ಕೊರತೆ

ಮತ್ತೊಂದು ಟ್ವೀಟ್‍ನಲ್ಲಿ ಎಚ್‍ಡಿಕೆ, ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನದ ಶುಭಕೋರಿದ್ದಾರೆ. ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭದಲ್ಲಿ ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ. ತಮಗೆ ದಕ್ಕಿದ ರಾಜಕೀಯ ಪರಮಾಧಿಕಾರವನ್ನು ತಳಸಮುದಾಯದ ಅಭಿವೃದ್ಧಿಗೆ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಅರಸು ಅವರ ಕಾರ್ಯ ವೈಖರಿ ಅನುಕರಣೀಯ. ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಭರದಲ್ಲಿ ಇತರ ಸಮುದಾಯಗಳ ಮೇಲೆ ಸವಾರಿ ಮಾಡದ ರಾಜಕೀಯ ಸೂಕ್ಷ್ಮ ಪ್ರಜ್ಞೆ ಅರಸು ಅವರಲ್ಲಿ ನಾನು ಕಂಡಿದ್ದೇನೆ. ಸಾಮಾಜಿಕ, ಆರ್ಥಿಕ ಸುಧಾರಣೆಗಳ ಹರಿಕಾರ ಅರಸು ಸದಾ ಸ್ಮರಣೀಯರು ಎಂದು ಬರೆದುಕೊಂಡಿದ್ದಾರೆ.

 

Share this

Share This Article
Leave a Comment

Leave a Reply

Your email address will not be published. Required fields are marked *