ಕೊಪ್ಪಳ: ಕೊಪ್ಪಳದ ಕುಕನೂರು ತಾಲೂಕಿನ ಇಟಗಿ ಗ್ರಾಮದ ಮನೆಯೊಂದರಲ್ಲಿ ಆಭರಣ ಕಳ್ಳತನ ಮಾಡಿದ ಪ್ರಕರಣದಡಿ ಒಂದೇ ದಿನದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಆಭರಣ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಆಸೀಫ್ ಎಲಿಗಾರ ಎಂದು ಗುರುತಿಸಲಾಗಿದೆ. ಈತನು ಮಸಬಂಚಿನಾಳ ಗ್ರಾಮದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ವೇಳೆ ಪೊಲೀಸರು ಅನುಮಾನಗೊಂಡು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಕುರಿತು ಬಾಯಿ ಬಿಟ್ಟಿದ್ದಾನೆ.
ಬಂಧಿತನಿಂದ ಬಂಗಾರ, ಹಣ ಸೇರಿದಂತೆ ಒಟ್ಟಾರೆ 2,92,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಕೇವಲ ಒಂದೇ ದಿನದಲ್ಲಿ ಪೊಲೀಸರು ಬೇಧಿಸಿದ್ದು ನಿಜಕ್ಕೂ ಪೊಲೀಸರ ಶ್ಲಾಘನೀಯ ಕಾರ್ಯವಾಗಿದೆ. ಪ್ರಕರಣ ಕುರಿತು ಡಿಎಸ್‍ಪಿ ಗೀತಾ ಮಾರ್ಗದರ್ಶನದಲ್ಲಿ ಸಿಪಿಐ ವೆಂಕಟೇಶ, ಪಿಎಸ್‍ಐ ಹಾಗೂ ಪೇದೆಗಳ ತಂಡವು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದಕ್ಕೆ ಎಸ್ಪಿ ಅವರು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.