– ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ
– ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ
ಬೀಜಿಂಗ್: ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯನ್ನು ಸೋಲಿಸಿ ನಂಬರ್ 2 ಪಟ್ಟಕ್ಕೆ ಕ್ಸಿಯೋಮಿ ಏರಿದೆ.
Canalys ಸಂಸ್ಥೆ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿಯನ್ನು ಪ್ರಕಟಿಸಿದೆ. 2ನೇ ತ್ರೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಶೇ. 12ರಷ್ಟು ಪ್ರಗತಿ ಸಾಧಿಸಿದೆ.
ವಿಶ್ವದ ಮಾರುಕಟ್ಟೆಯಲ್ಲಿ ಆಪಲ್ ಶೇ.14ರಷ್ಟು ಪಾಲನ್ನು ಹೊಂದಿದ್ದರೆ, ಕ್ಸಿಯೋಮಿ ಶೇ.17ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಶೇ.19ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ವರ್ಷದಿಂದ ವರ್ಷಕ್ಕೆ ಕ್ಸಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ. ಕ್ಸಿಯೋಮಿ ಶೇ.83ರಷ್ಟು ಬೆಳವಣಿಗೆ ಸಾಧಿಸಿದರೆ ಸ್ಯಾಮ್‍ಸಂಗ್ ಶೇ.15, ಆಪಲ್ ಶೇ.1 ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿದೆ.
ಕಡಿಮೆ ಬೆಲೆಯ ಮತ್ತು ಮಿಡ್ ರೇಂಜ್ ಫೋನ್ ಮಾರಾಟದಿಂದ ಕ್ಸಿಯೋಮಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನಕ್ಕೆ ಏರಿದ್ದರೂ ಆಪಲ್ ಫೋನ್ ಗಳಿಗೆ ಹೋಲಿಸಿದರೆ ಕ್ಸಿಯೋಮಿ ಫೋನ್ ಶೇ.75ರಷ್ಟು ಬೆಲೆ ಕಡಿಮೆಯಿದೆ.
https://twitter.com/manukumarjain/status/1415897728706519041
ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಯನ್ನು ಗುರಿಯಾಗಿಸಿ ಫೋನ್ ತಯಾರಿಸುತ್ತಿದ್ದ ಕ್ಸಿಯೋಮಿ ಈಗ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಎಂಐ 11 ಆಲ್ಟ್ರಾ, ಎಂಐ ಮಿಕ್ಸ್ ಫೋಲ್ಡ್ ಫೋನ್ ಬಿಡುಗಡೆ ಮಾಡಿದೆ.
ವಿಶ್ವದ ಸ್ಮಾರ್ಟ್‍ಫೋನ್ ಕಂಪನಿಗಳಲ್ಲಿ ಒಂದಾಗಿದ್ದ ಹುವಾವೇ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು ಕ್ಸಿಯೋಮಿಗೆ ವರದಾನವಾಗಿದೆ. ಸಾಫ್ಟ್ ವೇರ್ ಮತ್ತು ಚಿಪ್ ಪೂರೈಕೆಗೆ ತಡೆಯಾಗಿದ್ದರಿಂದ ಹುವಾವೇ ಸ್ಪರ್ಧೆಯಿಂದ ಹಿಂದೆ ಸರಿದರೆ ಕ್ಸಿಯೋಮಿ ನಿಧನವಾಗಿ ಬೆಳವಣಿಗೆಯಾಗಿ ಈಗ ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‍ಫೋನ್ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ
ಈ ವರ್ಷದ ಮಾರ್ಚ್ ನಲ್ಲಿ ಕ್ಸಿಯೋಮಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ತೊಡಗುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವುದಾಗಿ ಹೇಳಿದೆ.