ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಲಾಕ್‍ಡೌನ್ ಆದ ಪರಿಣಾಮ ಶಾಲಾ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆದರೆ ವಿದ್ಯಾರ್ಥಿಗಳ ಕಲಿಕೆ ಹಿಂದೆ ಉಳಿಯದಂತೆ ಸರ್ಕಾರವೇನೋ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ನೆಟ್‍ವರ್ಕ್ ಸಮಸ್ಯೆ ಹೇಳತೀರದಾಗಿದ್ದು, ವಿದ್ಯಾರ್ಥಿಗಳು ನೆಟ್‍ವರ್ಕ್ ಅರಸಿ ಕಾಡು ಮೇಡು ಅಲೆಯುವಂತಾಗಿದೆ.
Advertisement
ಮಲೆನಾಡು ಹಾಗೂ ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ವಿದ್ಯಾರ್ಥಿಗಳ ಆನ್‍ಲೈನ್ ತರಗತಿಗಳನ್ನು ನರಕ ಸದೃಶ್ಯವಾಗಿಸಿದೆ. ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ತರಗತಿ ಪಡೆಯಲು ನೆಟ್‍ವರ್ಕ್ ಹುಡುಕಿ ಮನೆಯಿಂದ ಎರಡು ಮೂರು ಕಿಲೋ ಮೀಟರ್ ದೂರ ಹೋಗಬೇಕಾಗಿದೆ. ದೂರದ ಎಲ್ಲೋ ಒಂದು ಬಸ್ ನಿಲ್ದಾಣದಲ್ಲಿ ನೆಟ್‍ವರ್ಕ್ ದೊರೆತರೆ ಅಲ್ಲಿಗೆ ಹೋಗಿ ಕುಳಿತು ಆನ್‍ಲೈನ್ ತರಗತಿ ವೀಕ್ಷಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿವೆ.
Advertisement
Advertisement
ಸೋಮವಾರಪೇಟೆ ತಾಲ್ಲೂಕಿನ ಕೂತಿ ಎನ್ನೋ ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಈ ಗ್ರಾಮದ ಸುತ್ತಮುತ್ತ ಇರುವ ಕೆರೆಕೊಪ್ಪ, ನಗರಳ್ಳಿ, ಕಾರೆಕೊಪ್ಪ ಮತ್ತು ಶಾಂತಳ್ಳಿ ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ನೂರಾರು ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಯಾವುದೋ ತೋಟದ ಮಧ್ಯದಲ್ಲಿ, ಕಾಡಿನ ಮಧ್ಯದಲ್ಲಿ ನೆಟ್‍ವರ್ಕ್ ಸಿಗುತ್ತಿದ್ದರೆ ಅಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಆದರೆ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಮಳೆಯಲ್ಲೇ ನೆನೆದುಕೊಂಡು ಬಸ್ ನಿಲ್ದಾಣಗಳಿಗೆ ಹೋಗಿ ಕುಳಿತು ಪಾಠ ಕೇಳಬೇಕಾಗಿದೆ.
Advertisement
ಇನ್ನು ಎಷ್ಟೋ ಗ್ರಾಮಗಳಲ್ಲಿ ತೋಟ, ಕಾಡಿನ ಮಧ್ಯೆ ನೆಟ್‍ವರ್ಕ್ ಸಿಗುತ್ತಿದ್ದರಿಂದ ಅಲ್ಲಿ ಕುಳಿತು ಆನ್‍ಲೈನ್ ಪಾಠ ಕೇಳುತ್ತಿದ್ದ ಹತ್ತಾರು ವಿದ್ಯಾರ್ಥಿಗಳು ಮಳೆಯಿಂದಾಗಿ ಆನ್ ಲೈನ್ ತರಗತಿಯಿಂದಲೂ ವಂಚಿತರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೆಟ್ ವರ್ಕ್ ಸಮಸ್ಯೆ ಬಗೆಹರಿಸಿ ಎನ್ನೋದು ವಿದ್ಯಾರ್ಥಿಗಳ ಒತ್ತಾಯವಾಗಿದೆ.