ಆನ್‍ಲೈನ್ ಶಿಕ್ಷಣ ದೂರು – ಕಟ್ಟುನಿಟ್ಟಿನ ಅನುಪಾಲನೆಗೆ ಸುರೇಶ್ ಕುಮಾರ್ ಸೂಚನೆ

Public TV
3 Min Read
suresh kumar

ಬೆಂಗಳೂರು: ಆನ್‍ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ, ಸಾರ್ವಜನಿಕರ ಯಾವುದೇ ದೂರುಗಳಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ, ಸಾರ್ವಜನಿಕ ಸಹಾಯವಾಣಿಗೆ ಫೋನ್ ಕರೆ ಮೂಲಕ ದಾಖಲಿಸಬಹುದೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆನ್‍ಲೈನ್ ಶಿಕ್ಷಣ ಕುರಿತಂತೆ ಹೊರಡಿಸಲಾದ ಸೂಚನೆಗಳನ್ವಯ ಸೂಕ್ತ ಅನುಪಾಲನಾ ವ್ಯವಸ್ಥೆ ಜಾರಿಯಲ್ಲಿಡುವ ಕುರಿತು ಮತ್ತು ಈ ಸುತ್ತೋಲೆಗಳ ಅನುಷ್ಠಾನದಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು. ಸಾರ್ವಜನಿಕರು ಆನ್‍ಲೈನ್ ಕುರಿತ ದೂರುಗಳನ್ನು ಶಿಕ್ಷಣವಾಣಿ-ಸಹಾಯವಾಣಿಗೆ (18004257302) ಇಲ್ಲವೇ ಸಹಾಯವಾಣಿ ವಾಟ್ಸಪ್ ಸಂಖ್ಯೆ-9483045130) ಸಲ್ಲಿಸಿ ಇಲಾಖೆಯ ಗಮನಕ್ಕೆ ತರುವ ಮೂಲಕ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

suresh kumar 2 1 e1595938530624

ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆನ್‍ಲೈನ್ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶನಿವಾರ ನಗರಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದರು.

ಯಾವುದೇ ಶಾಲೆಗಳಿರಲಿ ಆನ್‍ಲೈನ್ ಶಿಕ್ಷಣವನ್ನು ತಜ್ಞರ ಸಮಿತಿ ಶಿಫಾರಸಿನನ್ವಯ ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ವಯ ವೈಜ್ಞಾನಿಕವಾಗಿಯೇ ನಿರ್ವಹಿಸುವ ಕುರಿತು ಅಗತ್ಯ ಅನುಪಾಲನಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬಿಇಒಗಳು ಆನ್‍ಲೈನ್ ತರಗತಿಗಳ ಪರಾಮರ್ಶೆ ಮಾಡುವದರೊಂದಿಗೆ ಕೇಂದ್ರ ಕಚೇರಿಯಲ್ಲಿ ಈ ಕುರಿತ ಮಾಹಿತಿ ಯಾವುದೇ ಸಂದರ್ಭದಲ್ಲಿಯೂ ದೊರೆಯವಂತಾಗಬೇಕು ಎಂದು ಸುರೇಶ್ ಕುಮಾರ್ ಸೂಚಿಸಿದರು. ಈ ಬಗ್ಗೆ ಕೂಡಲೇ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಹ ನಿರ್ದೇಶನ ನೀಡಿದರು.

ONLINE

ಆನ್‍ಲೈನ್ ಶಾಲಾವಧಿ ನಿಗದಿಗೆ ಸೂಚನೆ:
ಆನ್‍ಲೈನ್ ಬೋಧನೆಯನ್ನು ಹಗಲು-ರಾತ್ರಿಯನ್ನದೇ ಯಾವುದೇ ಸಮಯದಲ್ಲೂ ಮಾಡಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಆನ್‍ಲೈನ್ ಬೋಧನೆಗೆ ತರಗತಿಗಳ ಅವಧಿಯನ್ನು ನಿಗದಿಪಡಿಸಿದಂತೆ ಆನ್‍ಲೈನ್ ಬೋಧನಾ ಶಾಲಾವಧಿಯನ್ನು ನಿಗದಿಪಡಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದರು.

ಈ ಕುರಿತಂತೆ ಜಿಲ್ಲೆ, ತಾಲೂಕು, ಬಿಆರ್‍ಸಿ, ಸಿಆರ್‍ಪಿ ಮಟ್ಟದಲ್ಲಿ ಶಾಲಾವಧಿಯನ್ನು ಗಮನಿಸಲು ಅಗತ್ಯ ಕ್ರಮ ವಹಿಸಬೇಕು. ಹಾಗೆಯೇ ಈ ಕುರಿತ ಸಮಸ್ಯೆಗಳಿದ್ದಲ್ಲಿ ಶಿಕ್ಷಣವಾಣಿ ಸಹಾಯವಾಣಿಗೆ ದೂರುಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡಬೇಕು. ಯಾವುದೇ ಶಾಲೆಗಳಿರಲಿ ತಮಗೆ ತೋಚಿದ ಅವಧಿಯಲ್ಲಿ ತಮಗೆ ತಿಳಿದಷ್ಟು ಸಮಯ ಆನ್‍ಲೈನ್ ಪಾಠ ಮಾಡಲು ಅವಕಾಶ ನೀಡಲಾಗದು. ತಜ್ಞರ ಸಮಿತಿ ನಿಗದಿಪಡಿಸಿರುವ ಸಮಯದಷ್ಟೇ ಅವಧಿಯಲ್ಲಿ ನಿರ್ವಹಿಸಬೇಕು. ಹಾಗೆಯೇ ಆನ್‍ಲೈನ್ ಶಾಲಾವಧಿಯನ್ನು ನಿಗದಿಪಡಿಸಿ ಸುತ್ತೋಲೆ ಹೊರಡಿಸಿ ಈ ಕುರಿತು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕೆಂದು ಸಚಿವರು ಆಯುಕ್ತರಿಗೆ ನಿರ್ದೇಶನ ನೀಡಿದರು.

suresh kumar 2

ಎನ್‍ಇಪಿ ಕುರಿತ ತಜ್ಞರ ವರದಿ ಸಲ್ಲಿಕೆ:
ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮೊದಲನೇ ರಾಜ್ಯವಾಗಲಿದ್ದು, ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯ ಅಳವಡಿಕೆಗೆ ಸಂಬಂಧಿಸಿದಂತೆ ನೇಮಿಸಲಾದ ತಜ್ಞರ ಸಮಿತಿ ನ. 7ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಸಮಿತಿಯ ವರದಿ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ತಜ್ಞರ ವರದಿಯ ಶಿಫಾರಸುಗಳನ್ನು ನೂತನ ಶಿಕ್ಷಣ ನೀತಿಯನ್ವಯ ಶೈಕ್ಷಣಿಕ ಕ್ಷೇತ್ರದಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಇದು ರಾಜ್ಯದ ಶಿಕ್ಷಣದಲ್ಲಿ ಹೊಸ ದಿಕ್ಕನ್ನು ಕಲ್ಪಿಸಲಿದೆ ಎಂದು ಸಚಿವರು ಹೇಳಿದ್ದಾರೆ.

suresh kumar 2

Share This Article
Leave a Comment

Leave a Reply

Your email address will not be published. Required fields are marked *