ಬೆಂಗಳೂರು: ಆನ್‍ಲೈನ್ ನಲ್ಲಿ ಮಧ್ಯ ಮಾರಾಟ ಮಾಡಲು ಸರ್ಕಾರದ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ನಾಗೇಶ್ ಅವರು, ಬೇರೆ ರಾಜ್ಯಗಳಲ್ಲಿ ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಹೇಗೆ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ನೀಡಲು ಅಬಕಾರಿ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆನ್ ಲೈನ್ ನಲ್ಲಿ ಮದ್ಯ ಮಾರಾಟ ವಿಚಾರವಾಗಿ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಹೇಗಿದೆ ಅನ್ನೋದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಆ ವರದಿಯ ಸಾಧಕ ಬಾಧಕಗಳ ಬಳಿಕ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಬಳಿಕ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದವರ ವಯಸ್ಸು ಎಷ್ಟು? ಯಾರು ಆರ್ಡರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿಯಬೇಕಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸುತ್ತಿದೆ ಎಂದರು.
ಮದ್ಯ ಖರೀದಿ ಮಾಡಲು ಕೆಲವರು ಹಿಂಜರಿಯುತ್ತಾರೆ. ಮದ್ಯದ ಅಂಗಡಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಇಂಥದವರಿಗೆ ಇದರಿಂದ ಅನುಕೂಲ ಆಗುತ್ತೆ. ಹೀಗಾಗಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ತಜ್ಞರು, ಬುದ್ಧಿಜೀವಿಗಳ ಜೊತೆ ಚರ್ಚೆ ಮಾಡುತ್ತೇವೆ. ಕೆಲವೊಂದು ವಿರೋಧಗಳು ಕೂಡ ಇದೆ. ಎಲ್ಲವೂ ವರದಿ ಬಂದ ಮೇಲೆಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಆದಾಯದ ನಿರೀಕ್ಷೆ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿರಲಿಲ್ಲ. ಇವತ್ತಿನಿಂದ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಕ್ಕೆ ಅವಕಾಶ ನೀಡಲಾಗಿದೆ. ನಿತ್ಯ 80 ಕೋಟಿ ರೂ. ಆದಾಯ ಲಭಿಸುತ್ತಿದ್ದು, ಸದ್ಯ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡುರುವುದರಿಂದ ಈಗ ಮತ್ತೆ ಅದು ಶೇ.50 ಆದಾಯ ಜಾಸ್ತಿಯಾಗುವ ನಿರೀಕ್ಷೆ ಇದೆ. 2019-20 ರಲ್ಲಿ 20,900 ಸಾವಿರ ಕೋಟಿ ರೂ. ಆದಾಯ ಗಳಿಸುವ ಟಾರ್ಗೆಟ್ ಇತ್ತು. ಈಗ 22,700 ಕೋಟಿ ರೂ. ಆದಾಯದ ಟಾರ್ಗೆಟ್ ಇದೆ. ಎಂಎಸ್‍ಐಎಲ್ ಹೊಸದಾಗಿ ಲೈಸೆನ್ಸ್ ನೀಡುತ್ತಿದ್ದು, ಬೇರೆ ಯಾವುದೇ ಲೈಸನ್ಸ್ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಡ್ರಗ್ಸ್ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಡ್ರಗ್ಸ್ ವಿಚಾರಗಳು ಇಲಾಖೆ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ಗಮನ ತರುವ ಕೆಲಸ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಚರಣೆಗೆ ಚಿಂತನೆ ನಡೆಯುತ್ತಿದೆ. ಸಿಸಿಬಿ ಸೆಂಟ್ರಲ್ ಐಜಿ ಬೆಂಗಳೂರು ನಗರ ಅಯುಕ್ತರ ನೇತೃತ್ವದಲ್ಲಿ ಕಾರ್ಯಚರಣೆಗೆ ಚಿಂತನೆ ಇದೆ. ಶೀಘ್ರದಲ್ಲೇ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.