ಬೆಂಗಳೂರು: ಮಕ್ಕಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆನ್‍ಲೈನ್ ತರಗತಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾವ ತರಗತಿಯ ಮಕ್ಕಳು, ಎಷ್ಟು ದಿನ, ಎಷ್ಟು ಗಂಟೆ ಆನ್‍ಲೈನ್ ತರಗತಿಯಲ್ಲಿ ಕೂರಬೇಕು ಎಂಬ ಕುರಿತು ತಿಳಿಸಿದೆ.
ಆನ್‍ಲೈನ್ ತರಗತಿ ಕುರಿತು ಈಗಾಗಲೇ ದೂರುಗಳು ಬರುತ್ತಿದ್ದು, ಮಕ್ಕಳಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪೋಷಕರು ದೂರುತ್ತಿದ್ದಾರೆ. ಶೇ.20 ಮಕ್ಕಳಿಗೆ ಕತ್ತು, ಬೆನ್ನು ನೋವು ಸಮಸ್ಯೆ ಕಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿರಂತರ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ತೊಂದರೆಯ ಜೊತೆಗೆ ಈಗ ಕತ್ತು ಹಾಗೂ ಬೆನ್ನು ನೋವಿನಿಂದ ಮಕ್ಕಳು ನರಳುತ್ತಿದ್ದಾರೆ. ಇದರಿಂದಾಗಿ ಪೋಷಕರು ಹೈರಾಣಾಗಿದ್ದಾರೆ. ಹೀಗಾಗಿ ತಜ್ಞರ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ವಯೋಮಾನಕ್ಕನುಗುಣವಾಗಿ ಆನ್‍ಲೈನ್ ಕ್ಲಾಸ್ ನಡೆಸುವಂತೆ ತಿಳಿಸಲಾಗಿದ್ದು, 2ನೇ ತರಗತಿಯವರೆಗೆ ದಿನ ಬಿಟ್ಟು ದಿನ ಹಾಗೂ 3ನೇ ತರಗತಿಯ ನಂತರದ ಮಕ್ಕಳಿಗೆ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಬಹದು. ಎರಡು ದಿನ ಕಡ್ಡಾಯವಾಗಿ ರಜೆ ನೀಡಬೇಕು. 2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ ಇರಬೇಕು.
ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ 1983(1995) ರ ಸೆಕ್ಷನ್ 124(5) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಯಾವ ಮಕ್ಕಳಿಗೆ ಎಷ್ಟು ದಿನ ತರಗತಿ?
3ರಿಂದ 6 ವರ್ಷದ ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನದಂತೆ ವಾರಕ್ಕೆ 3 ದಿನ ತರಗತಿ ನಡೆಸಬೇಕು. ಇದಕ್ಕೆ ಪೋಷಕರ ಹಾಜರಾತಿ ಕಡ್ಡಾಯವಾಗಿದೆ. ಪ್ರತಿ ದಿನ ಕೇವಲ ಗರಿಷ್ಠ 30 ನಿಮಿಷ ಮಾತ್ರ ನಡೆಸಬೇಕು. 1 ರಿಂದ 2ನೇ ತರಗತಿ ಮಕ್ಕಳಿಗೂ ಇದೇ ನಿಯಮ ಅನ್ವಯವಾಗಲಿದೆ. ಆದರೆ ದಿನಕ್ಕೆ 2 ಸೆಷನ್ ಮಾಡಬಹುದಾಗಿದೆ. ಇವರಿಗೂ ತರಗತಿ ಅವಧಿ ಗರಿಷ್ಠ 30 ನಿಮಿಷ ಮಾತ್ರ.
3ರಿಂದ 5ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಸೆಷನ್ ನಂತೆ ವಾರಕ್ಕೆ 5 ದಿನ ಕ್ಲಾಸ್ ನಡೆಸಬಹುದು. ಇದಕ್ಕೆ ಪೋಷಕರ ಹಾಜರಿ ಕಡ್ಡಾಯವಲ್ಲ. ಇವರಿಗೆ ತರಗತಿ ಅವಧಿ ಗರಿಷ್ಠ 30 ನಿಮಿಷ. 6ರಿಂದ 10ನೇ ತರಗತಿಯವರಿಗೆ ದಿನಕ್ಕೆ 3 ಸೆಷನ್‍ನಂತೆ ವಾರಕ್ಕೆ 5 ದಿನ ತರಗತಿ ನಡೆಸಬಹುದು. ಇವರಿಗೂ ಪೋಷಕರ ಹಾಜರಿ ಕಡ್ಡಾಯವಲ್ಲ. ಒಂದು ಸೆಷನ್ ಅವಧಿ ಗರಿಷ್ಠ 30-45 ನಿಮಿಷವಾಗಿದೆ.