– ತಂದೆ ಸಾಲ ತೀರಿಸಲು ಸಿದ್ಧರಿದ್ರೂ ವಿಷ ಸೇವನೆ
ಹೈದರಾಬಾದ್: ಆನ್‍ಲೈನ್ ಬೆಟ್ಟಿಂಗ್ ಗೇಮ್‍ವೊಂದರಲ್ಲಿ 15 ಲಕ್ಷ ಹಣ ಕಳೆದುಕೊಂಡ ನಂತರ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಥೋಟಾ ಮಧುಕರ್ (24) ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ. ಮಧುಕರ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಾಲ್ಕು ದಿನಗಳ ಹಿಂದೆ ನಿಷೇಧಿತ ಆಟದಲ್ಲಿ 15 ಲಕ್ಷ ಹಣ ಕಳೆದುಕೊಂಡ ನಂತರ ಮಧುಕರ್ ವಿಷ ಕುಡಿದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧುಕರ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಧುಕರ್ ಆನ್‍ಲೈನ್ ಬೆಟ್ಟಿಂಗ್ ಗೇಮ್‍ವೊಂದರಲ್ಲಿ ಆಟವಾಡುತ್ತಿದ್ದನು. ಐದು ತಿಂಗಳ ಹಿಂದೆ ಪೋಷಕರು ಮತ್ತು ಕುಟುಂಬದವರು ಗೇಮ್ ಆಡದಂತೆ ಎಚ್ಚರಿಕೆ ನೀಡಿದ್ದರು. ಆದರೂ ಮಧುಕರ್ ಬೆಟ್ಟಿಂಗ್ ಗೇಮ್ ಆಡುತ್ತಿದ್ದನು. ಅಲ್ಲದೇ ಆತ ತನ್ನ ಸ್ನೇಹಿತರಿಂದ ಹಣವನ್ನು ಸಾಲ ಪಡೆದು ಬೆಟ್ಟಿಂಗ್ ಕಟ್ಟಿದ್ದನು. ಇದರಿಂದ ಜೂಲೈ 7 ರಂದು ಮಧುಕರ್ ಬರೋಬ್ಬರಿ 15 ಲಕ್ಷ ಹಣವನ್ನು ಕಳೆದುಕೊಂಡಿದ್ದನು. ಇದರಿಂದ ತುಂಬಾ ಬೇಸರಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಧುಕರ್ ತಂದೆ ಈ ಬಗ್ಗೆ ತಿಳಿದು ಸಾಲವನ್ನು ಮರುಪಾವತಿಸಲು ಸಿದ್ಧವಾಗಿದ್ದರು. ಆದರೂ ಎಂಜಿನಿಯರಿಂಗ್ ವಿದ್ಯಾರ್ಥಿ ವಿಷ ಕುಡಿದಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಹೋದರಿಯ ಮೊಬೈಲ್ ಫೋನ್‍ಗೆ ಮೆಸೇಜ್ ಕಳುಹಿಸಿದ್ದನು. ನಂತರ ಪೋಷಕರು ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಧುಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಮಧುಕರ್ ಮೃತಪಟ್ಟಿದ್ದಾನೆ. ಮಧುಕರ್ ತಂದೆ ಶಂಕರ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.