ಕೋಲ್ಕತ್ತಾ: ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಇಲ್ಲ, ಹೀಗಾಗಿ ಆನ್‍ಲೈನ್ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ ಎಂದು ಮನನೊಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯ ನಿಸ್ಚಿಂಡಾದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿನಿಯನ್ನು ಶಬಿನಿ ಕುಮಾರಿ ಸೌ ಎಂದು ಗುರುತಿಸಲಾಗಿದೆ. ಶಬಿನಿ ಬ್ಯಾಲಿ ಪ್ರದೇಶದಲ್ಲಿರುವ ಇಂಗ್ಲಿಷ್ ಮಾಧ್ಯಮದ ಶಾಲೆಯೊಂದರಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು. ಈಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‍ನೋಟ್ ಅನ್ನು ಬರೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಶಬಿನಿ ತಂದೆ ಸಂತೂ, ಶಬಿನಿ ನನ್ನ ಚಿಕ್ಕಮಗಳು, ಲಾಕ್‍ಡೌನ್ ವೇಳೆ ನಾನು, ನನ್ನ ಪತ್ನಿ ಮತ್ತು ಹಿರಿಯ ಮಗ ನಮ್ಮ ಹೋಮ್‍ಟೌನ್‍ಗೆ ಹೋಗಿದ್ದವು. ಈ ವೇಳೆ ಶಬಿನಿ ಮತ್ತು ಆಕೆಯ ಮತ್ತೋರ್ವ ಅಣ್ಣ ಮನೆಯಲ್ಲೇ ಇದ್ದರು. ಅವರ ಬಳಿ ಮೊಬೈಲ್ ಇತ್ತು. ಆದರೆ ಅದನ್ನು ಬೀಳಿಸಿ ಒಡೆದು ಹಾಕಿದ್ದಾರೆ. ಲಾಕ್‍ಡೌನ್ ಅಲ್ಲಿ ಮೊಬೈಲ್ ಅಂಗಡಿ ಓಪನ್ ಇಲ್ಲದ ಕಾರಣ ಸರಿಮಾಡಿಸಲು ಆಗಿಲ್ಲ ಎಂದು ಹೇಳಿದ್ದಾರೆ.
ಆನ್‍ಲೈನ್ ಕ್ಲಾಸ್ ಅಟೆಂಡ್ ಮಾಡದೆ ಇದ್ದರೆ, ನಾನು ಫೈಲ್ ಆಗುತ್ತೇನೆ ಎಂದು ಶಬಿನಿ ಭಯಪಟ್ಟಿದ್ದಾಳೆ. ಆಕೆ ಖಿನ್ನತೆಗೆ ಒಳಗಾಗಿ ನನಗೆ ಕರೆ ಮಾಡಿ ಮಾತನಾಡಿದಳು. ಆಗ ನಾನು ಮನೆಗೆ ಬಂದು ಹೊಸ ಫೋನ್ ತರುವುದಾಗಿ ಅಲ್ಲಿಯವರೆಗೂ ಸ್ನೇಹಿತರ ಬಳಿ ನೋಟ್ಸ್ ಪಡೆದು ಓದು ಎಂದು ಹೇಳಿದ್ದೆ. ಆದರೆ ಗುರುವಾರ ಸಂಜೆ ಅವರ ಅಣ್ಣ ಕ್ರಿಕೆಟ್ ಅಭ್ಯಾಸಕ್ಕೆ ಹೋದಾಗ ಶಬಿನಿ ನೇಣು ಹಾಕಿಕೊಂಡಿದ್ದಾಳೆ ಎಂದು ಶಬಿನಿ ತಂದೆ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆಕೆಯ ಅಣ್ಣ ಹೊರಗೆ ಹೋದಾಗ, ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರ ಅಣ್ಣ ಬಂದು ಬಾಗಿಲು ಬಡೆದಾಗ ತೆಗೆದಿಲ್ಲ. ಆಗ ಆಕೆಯ ಅಣ್ಣ ಕಿಟಿಕಿಯಿಂದ ಒಳ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.