– ಛತ್ರಿ ಹಿಡಿದು ಪೋಷಕರಿಂದ ವಿದ್ಯಾರ್ಥಿಗಳಿಗೆ ಸಹಕಾರ
ಮಂಗಳೂರು: ಕೊರೊನಾ ಹಿನ್ನೆಲೆ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ ಇದು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ನರಕಸದೃಶ್ಯವಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ನೆಟ್‍ವರ್ಕ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಗುಡ್ಡ ಏರಿ ಕುಳಿತುಕೊಳ್ಳುತ್ತಿದ್ದಾರೆ. ಇದೀಗ ಮಳೆ ನಡುವೆಯೂ ಆನ್‍ಲೈನ್ ಕ್ಲಾಸ್‍ಗಾಗಿ ವಿದ್ಯಾರ್ಥಿಗಳು ಗುಡ್ಡ ಏರಿ ಕುಳಿತುಕೊಳ್ಳುತ್ತಿದ್ದು, ಪೋಷಕರು ಛತ್ರಿ ಹಿಡಿದು ಪೋಷಕರು ಸಹಕಾರ ನೀಡುತ್ತಿದ್ದಾರೆ.
Advertisement
ನೆಟ್‍ವರ್ಕ್ ಸಮಸ್ಯೆ ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಗಗನ ಕುಸುಮವಾಗಿದ್ದು, ವಿದ್ಯಾರ್ಥಿಗಳು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಭಾರೀ ಗಾಳಿ, ಮಳೆಗೆ ಜೀವ ಕೈಯಲ್ಲಿ ಹಿಡಿದು ಆನ್‍ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ. ಗುಡ್ಡದ ಮೇಲಿನ ರಸ್ತೆಯಲ್ಲಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ ನಡೆಯುತ್ತಿದ್ದು, ಭಾರೀ ಮಳೆಗೆ ಪೋಷಕರು ವಿದ್ಯಾರ್ಥಿಗಳಿಗೆ ಛತ್ರಿಯ ಆಸರೆ ನೀಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಗುಡ್ಡದ ಮೇಲೆ ಪ್ಲಾಸ್ಟಿಕ್ ಗುಡಿಸಲಿನಲ್ಲೇ ದಿನವಿಡೀ ವಾಸವಾಗಿರಬೇಕಾದ ದುಸ್ಥಿತಿಯೂ ಇದೆ ಎಂದು ವಿದ್ಯಾರ್ಥಿ ಉದಿತ್ ಶಾಮ್ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಈ ಭಾಗದಲ್ಲಿ ಎಸ್‍ಎಸ್‍ಎಲ್‍ಸಿ ಸೇರಿದಂತೆ ಕಾಲೇಜು, ಡಿಪ್ಲೊಮಾಗಳಿಗೆ ಹೋಗುವ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ನೆಟ್‍ವರ್ಕ್ ಸಮಸ್ಯೆಯ ಜೊತೆಗೆ ಗುಡ್ಡದಲ್ಲಿ ಪಾಠ ಕೇಳುವಾಗ ಭಾರೀ ಗಾಳಿ, ಮಳೆಗೆ ಮರಗಳು ಬೀಳುವ ಆತಂಕವೂ ಇದೆ. ಇದೆಲ್ಲದರ ನಡುವೆ ಕಲಿತ ಪಾಠ ಅದೆಷ್ಟು ಅರ್ಥವಾಗುತ್ತೋ, ಬಿಡುತ್ತೋ ದೇವನೇ ಬಲ್ಲ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಾಗ ಗ್ರಾಮಾಂತರ ವಿದ್ಯಾರ್ಥಿಗಳ ಸಮಸ್ಯೆಯನ್ನೂ ಗಮನಿಸಬೇಕು ಎನ್ನುವುದು ಪೋಷಕರ ಆಗ್ರಹವಾಗಿದೆ.