ಬೆಂಗಳೂರು: ಆನ್‍ಲೈನ್ ತರಗತಿಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದ್ದು, ಕೆಲ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕೆಲ ಶಾಲೆಗಳು ಮನಸೋಯಿಚ್ಛೆ ಆನ್‍ಲೈನ್ ತರಗತಿಗಳನ್ನ ನಡೆಸುತ್ತಿರುವ ಬಗ್ಗೆ ದೂರುಗಳ ಕೇಳಿ ಬಂದಿದ್ದವು. ಈ ಹಿನ್ನೆಲೆ ಕೊನೆಗೂ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಆನ್‍ಲೈನ್ ಕ್ಲಾಸ್ ಗಳಿಗಾಗಿ ಮಾರ್ಗಸೂಚಿ ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ.
Advertisement
Advertisement
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ಮೇರೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ. ಸರ್ಕಾರ ನೀಡುವ ಎಲ್ಲ ಮಾರ್ಗಸೂಚಿಗಳನ್ನ ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ಎಚ್ಚರಿಕೆ ನೀಡಲು ಸುರೇಶ್ ಕುಮಾರ್ ಮುಂದಾಗಿದ್ದಾರೆ.
Advertisement
Advertisement
ಮಾರ್ಗಸೂಚಿಯಲ್ಲಿ ಏನಿರಬಹುದು?
* ಆನ್‍ಲೈನ್ ತರಗತಿ ಕಡ್ಡಾಯವಾಗಿ ಪಡೆಯಬೇಕು ಅಂತ ವಿದ್ಯಾರ್ಥಿಗಳು, ಪೋಷಕರಿಗೆ ಒತ್ತಾಯ ಮಾಡುವ ಹಾಗಿಲ್ಲ. ಆನ್‍ಲೈನ್ ತರಗತಿಗೆ ಹೆಚ್ಚುವರಿ ಶುಲ್ಕ ಪಡೆಯವಂತಿಲ್ಲ. ಯಾವುದೇ ವಿದ್ಯಾರ್ಥಿಗಳಿಗೆ ದಿನಪೂರ್ತಿ ಅಥವಾ ಗಂಟೆಗಟ್ಟಲೆ ಆನ್‍ಲೈನ್ ತರಗತಿ ನಡೆಸುವಂತೆ ಇಲ್ಲ.
* ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಅವಧಿ 30 ನಿಮಿಷ ಮೀರದಂತೆ ವಾರದಲ್ಲಿ 2 ಅಥವಾ 3 ದಿನಗಳು ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ದಿನ ಬಿಟ್ಟು ದಿನ ಆನ್‍ಲೈನ್ ತರಗತಿ ನೀಡುವ ಬಗ್ಗೆ ಕ್ರಮವಹಿಸಬೇಕು. ಉಳಿದ ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡುವುದು ಕಡ್ಡಾಯ.
* ಪೂರ್ವ ಪ್ರಾಥಮಿಕ ತರಗತಿಗಳಿಗೆ ಆನ್‍ಲೈನ್ ತರಗತಿ ನಡೆಸಲು ಪೋಷಕರು ವಿದ್ಯಾರ್ಥಿ ಜೊತೆ ಇರೋದು ಕಡ್ಡಾಯ. ನೇರ ಪ್ರಸಾದರ ತರಗತಿಗಿಂತ ಪೂರ್ವ ಮುದ್ರಿತ ವಿಡಿಯೋ ತರಗತಿಗಳಿಗೆ ಒತ್ತು ನೀಡಬೇಕು.
* 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ ಗರಿಷ್ಠ 4 ಅವಧಿಯಲ್ಲಿ ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ಪ್ರತಿ ಅವಧಿಗೆ ಗರಿಷ್ಠ ಸಮಯ 30-45 ನಿಮಿಷ ಮೀರದಂತೆ ಆನ್ ಲೈನ್ ತರಗತಿ ಮಾಡಬೇಕು. ಕಡ್ಡಾಯವಾಗಿ ಬೆಳಗ್ಗೆ ಎರಡು ಅವಧಿ ಮಧ್ಯಾಹ್ನದ ನಂತರ ಎರಡು ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಸಬೇಕು. ಪ್ರತಿ ಅವಧಿಯ ಕ್ಲಾಸ್ ಮುಗಿದ ನಂತರ ಕನಿಷ್ಠ 30-45 ನಿಮಿಷ ವಿದ್ಯಾರ್ಥಿಗೆ ಬಿಡುವಿನ ಸಮಯ ನೀಡಬೇಕು. 3 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಗರಿಷ್ಠ 4-5 ದಿನಗಳು ಮಾತ್ರ ಆನ್‍ಲೈನ್ ತರಗತಿ ನಡೆಸಬೇಕು. ಉಳಿದ ಎರಡು-ಮೂರು ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡಬೇಕು.
* ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದ ಶಾಲೆ ವಿರುದ್ಧ ಪೋಷಕರು ದೂರು ನೀಡಬಹುದು. ಪೋಷಕರು ದೂರು ನೀಡಲು ಸಹಾಯವಾಣಿ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಅಂತಹ ಶಾಲೆಗಳ ವಿರುದ್ಧ ಪೋಷಕರು ಸಹಾಯವಾಣಿಗೆ ದೂರು ನೀಡಬಹುದು.