ಮಂಗಳೂರು: ಲಾಕ್‍ಡೌನ್ ನಡುವೆಯೂ ಕರಾವಳಿಯಲ್ಲಿ ಯಕ್ಷಗಾನ ಮತ್ತೆ ಶುರುವಾಗಿದೆ ಎಂಬ ಸಂತಸದ ಸುದ್ದಿಯೊಂದು ಸಿಕ್ಕಿದೆ. ಆದರೆ ಪ್ರೇಕ್ಷಕರು ಬರುವಂತಿಲ್ಲ ಬದಲಾಗಿ ಆನ್‍ಲೈನಿನಲ್ಲಿ ವೀಕ್ಷಿಸಬಹುದಾಗಿದೆ.
ಕರಾವಳಿ ಉದ್ದಗಲದಲ್ಲಿ ಚೆಂಡೆ ಮದ್ದಳೆ ಚಕ್ರತಾಳದ ಸದ್ದು, ಭಾಗವತರ ಸುಶ್ರಾವ್ಯ ಪದ, ಕಲಾವಿದರ ಕುಣಿತ ಸಂಭಾಷಣೆ ಇವುಗಳಿಲ್ಲದೇ ಸುಮಾರು ಎರಡು ತಿಂಗಳಾಯ್ತು. ಯಾವುದೇ ಗಲಾಟೆ, ಕರ್ಫ್ಯೂ ಇದ್ದರೂ ಯಕ್ಷಗಾನಕ್ಕೆ ತಡೆ ಇರುತ್ತಿರಲಿಲ್ಲ. ಆದರೆ ಕೊರೊನಾ ಮಾಹಾಮಾರಿಯಿಂದಾಗಿ ಇದೇ ಮೊದಲ ಬಾರಿಗೆ ಯಕ್ಷಗಾನ ನಿಂತಿದ್ದು, ಯಕ್ಷಗಾನ ಪ್ರಿಯರಿಗೆ ಬಾರಿ ನಿರಾಸೆಯಾಗಿದೆ.
Advertisement
Advertisement
ಈಗ ಖ್ಯಾತ ಯಕ್ಷಗಾನ ಭಾಗವತ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಮುಂದಾಳತ್ವದ ಯಕ್ಷದ್ರುವ ಪಟ್ಲ ಫೌಂಡೇಷನ್ ಆನ್‍ಲೈನಿನಲ್ಲಿ ಸಪ್ತಾಹ ಮಾಡಲು ಮುಂದಾಗಿದೆ. ತೆಂಕು ಹಾಗೂ ಬಡಗು ತಿಟ್ಟುವಿನ ಖ್ಯಾತ 40 ಕಲಾವಿದರನ್ನು ಒಳಗೊಂಡ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮೇ 25 ರಂದು ಆರಂಭವಾಗಿ 31ರವರೆಗೆ ನಡೆಯಲಿದೆ.
Advertisement
ಸಂಜೆ ನಾಲ್ಕರಿಂದ 6 ಗಂಟೆಯವರೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಯಕ್ಷಗಾನ ತಾಳಮದ್ದಳೆ ಯೂಟ್ಯೂಬ್/ ಫೇಸ್‍ಬುಕ್ ನಲ್ಲಿ ಲೈವ್ ಆಗಿ ಪ್ರಸಾರಗೊಳ್ಳಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಆಯಾದಿನದ ಕಲಾವಿದರು ಮಾತ್ರ ಪಾಲ್ಗೊಳ್ಳುತ್ತಾರೆ.
Advertisement
ಈ ತಾಳಮದ್ದಳೆ ಸಪ್ತಾಹದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸುವ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ಪ್ರಚಾರ ಪಡೆದುಕೊಂಡು ಯಶಸ್ಸಿನ ಮುನ್ಸೂಚನೆ ಸಿಕ್ಕಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಇದು ಹೊಸ ಆನ್ಲೈನ್ ತಾಳಮದ್ದಳೆ ಸಪ್ತಾಹ ಹೊಸ ಪ್ರಯೋಗವಾಗಿದ್ದು. ಇಷ್ಟು ದಿನ ಹಳೆಯ ಯಕ್ಷಗಾನ ವಿಡಿಯೋ ತುಣುಕುಗಳನ್ನು ಯೂಟ್ಯೂಬ್ ಹಾಗೂ ಫೇಸ್‍ಬುಕ್ ಗಳಲ್ಲಿ ವೀಕ್ಷಿಸುತ್ತಿದ್ದರು. ಆದರೆ ಈಗ ಯಕ್ಷಗಾನ ಪ್ರೇಕ್ಷಕರಿಗೆ ಇನ್ನು ಮುಂದೆ ಲೈವ್ ಆಗಿ ತಾಳಮದ್ದಳೆ ವೀಕ್ಷಣೆ ಮಾಡಬಹುದು.