ನವದೆಹಲಿ: ಆನ್‌ಲೈನ್ ರಮ್ಮಿ ಗೇಮ್‍ನಿಂದ ದೇಶದ ಯುವಕರು ದಾರಿ ತಪ್ಪುತ್ತಿದ್ದು, ಹಣ ಕಳೆದುಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ರಮ್ಮಿ ನಿಷೇಧಿಸುವಂತೆ ರಾಜ್ಯಸಭೆ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹಿಸಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಈ ಬಗ್ಗೆ ವಿಶೇಷ ಗಮನ ಸೆಳೆದ ಕೆ.ಸಿ ರಾಮಮೂರ್ತಿ, ಕ್ರಿಕೆಟಿಗ ಎಂ.ಎಸ್ ಧೋನಿ ಮತ್ತು ಅನೇಕ ನಟ-ನಟಿಯರು ಈ ಗೇಮ್ ಗಳಿಗೆ ಜಾಹೀರಾತು ನೀಡುತ್ತಿದ್ದು ಇದರಿಂದ ದೇಶದ ಯುವಕರು ಪ್ರೇರಣೆಗೊಳ್ಳುತ್ತಿದ್ದಾರೆ ಎಂದರು.
ಆನ್‌ಲೈನ್ ರಮ್ಮಿ ಕೌಶಲ್ಯಯುತ ಆಟ ಎಂದು ಪರಿಗಣಿಸಿದೆ ಆದರೆ ಹೆಚ್ಚಿನ ಹಣ ಪಡೆಯುವ ದುರಾಸೆಯಲ್ಲಿ ಹೆಚ್ಚಿನ ಹಣವನ್ನು ಜೂಜಿನಲ್ಲಿಡಲಾಗುತ್ತಿದೆ. ಬೆಟ್ಟಿಂಗ್ ಎನ್ನುವುದು ಕೌಶಲ್ಯವಲ್ಲ ಈ ಬೆಳವಣಿಗಳನ್ನು ಕುಟುಂಬದ ಆರ್ಥಿಕತೆಯನ್ನು ಹಾಳು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಟ್ಟಿಂಗ್ ದಂಧೆಗೆ ಬೀಳುವ ಯುವಕರು ಆನ್‌ಲೈನ್ ಗೇಮಿಂಗ್ ವ್ಯಸನಿಗಳಾಗುತ್ತಿದ್ದಾರೆ. ವಿಶೇಷ ಜಾಹೀರಾತು ಬಳಸಿ ಇದು ಲಾಭದಾಯಕ ಎಂದು ಬಿಂಬಿಸಲಾಗುತ್ತಿರುವುದು ದುರದೃಷ್ಟಕರ. ಇದನ್ನು ನಂಬಿ ಯುವಕರು ಹಣ ಕಳೆದುಕೊಂಡು ಬಳಿಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಕೆಪಿಎಂಜಿ ವರದಿಯನ್ನು ಉಲ್ಲೇಖಿಸಿದ ಅವರು, ಆನ್‍ಲೈನ್ ರಿಯಲ್ ಮನೀ ಗೇಮಿಂಗ್ ಉದ್ಯಮವು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಇದು ವಾರ್ಷಿಕವಾಗಿ 30% ರಷ್ಟು ಬೆಳೆಯುತ್ತಿದೆ. 2023 ರ ವೇಳೆಗೆ 12,000 ಕೋಟಿ ರೂ ಆಗಲಿದೆ.
ಪ್ರಪಂಚದಲ್ಲಿ ಈ ವೇಗದಲ್ಲಿ ಬೆಳೆಯಬಲ್ಲ ಯಾವುದೇ ಉದ್ಯಮವನ್ನು ನಾನು ನೋಡಿಲ್ಲ, ಆನ್‍ಲೈನ್ ರಮ್ಮಿಯನ್ನು ಒಳಗೊಂಡ ಆನ್‍ಲೈನ್ ನೈಜ ಹಣದ ಗೇಮಿಂಗ್ ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಹೀಗಾಗಿ ಆನ್‍ಲೈನ್ ರಮ್ಮಿ ಗೇಮ್ ನಿಷೇಧಿಸುವಂತೆ ಒತ್ತಾಯಿಸಿದರು.