– 7ರಿಂದ 10 ದಿನಗಳಲ್ಲಿ ಬರಲಿದೆ ವರದಿ
– ಮಾವುತರೊಂದಿಗೆ ಸಂಪರ್ಕದ ಹಿನ್ನೆಲೆ ಪರೀಕ್ಷೆ
ಜೈಪುರ: ರಾಜಸ್ಥಾನ ಒಂದೇ ದಿನದಲ್ಲಿ 25 ಸಾವಿರ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಮೂಲಕ ದೆಹಲಿ ಹಾಗೂ ತಮಿಳುನಾಡು ನಂತರ ಒಂದೇ ದಿನ ಹೆಚ್ಚು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ದೇಶದಲ್ಲೇ ಮೊದಲು ಎಂಬಂತೆ ಆನೆಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಆನೆಗಳ ತಾಣವಾಗಿರುವ ಜೈಪುರದಲ್ಲಿ ಗುರುವಾರದಿಂದ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, 110ಕ್ಕೂ ಹೆಚ್ಚು ಆನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ 63 ಆನೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಅಂಬರ್ ಕೋಟೆ ಬಳಿ ತಮ್ಮ ಮಾಲೀಕರ ಬಳಿ ಇರುವ ಆನೆಗಳಿಗೂ ಟೆಸ್ಟ್ ಮಾಡಿಸಲಾಗುತ್ತಿದೆ.
ರಾಜಸ್ಥಾನದಲ್ಲಿ ಮೊದಲ ಬಾರಿಗೆ ಆನೆಗಳ ಕಣ್ಣು ಹಾಗೂ ಗಂಟಲು ದ್ರವ ಸಂಗ್ರಹಿಸಲಾಗಿದೆ. ಮಾದರಿಗಳನ್ನು ಬರೇಲಿಯ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುತ್ತಿದೆ ಎಂದು ಮೂರು ದಿನಗಳ ಕ್ಯಾಂಪ್‍ನ ಮೊದಲ ದಿನದಲ್ಲಿ ಮೂವರು ಪಶು ವೈದ್ಯರೊಂದಿಗೆ 50 ಆನೆಗಳ ಪರೀಕ್ಷೆ ನಡೆಸಿದ ವೈದ್ಯ ಅರವಿಂದ್ ಮಾಥುರ್ ಅವರು ಮಾಹಿತಿ ನೀಡಿದ್ದಾರೆ.
ಈ ಮೂರು ದಿನಗಳ ಕ್ಯಾಂಪ್‍ನ್ನು ಹಾಥಿಗಾಂವ್ ವಿಕಾಸ್ ಸಮಿತಿಯ ಸಹಯೋಗದಲ್ಲಿ ರಾಜಸ್ಥಾನ ಅರಣ್ಯ ಇಲಾಖೆ ಆಯೋಜಿಸಿದೆ. ವಿವಿಧ ಕಾಯಿಲೆಗಳ ಕುರಿತು ಪರೀಕ್ಷಿಸಲು ಪ್ರತಿ 6 ತಿಂಗಳಿಗೊಮ್ಮೆ ಇಂತಹದ್ದೇ ಕ್ಯಾಂಪ್‍ಗಳನ್ನು ಹಾಕಿಕೊಳ್ಳಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರವಾಸಿಗರು ಕೋಟೆಯ ಕಡಿದಾದ ಕಲ್ಲಿನ ಮಾರ್ಗಗಳಲ್ಲಿ ಸವಾರಿ ಮಾಡಲು ಜೈಪುರದ ಆನೆಗಳನ್ನು ಬಳಸುತ್ತಾರೆ. ಹೀಗಾಗಿ ಇವು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆನೆಗಳು ಮಾವುತನೊಂದಿಗೆ ಹತ್ತಿರದ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ.
ಹಾಥಿಗಾಂವ್ ವಿಕಾಸ್ ಸಮಿತಿ ಅಧ್ಯಕ್ಷ ಬಲ್ಲು ಖಾನ್ ಈ ಕುರಿತು ಮಾಹಿತಿ ನೀಡಿ, ಆನೆಗಳನ್ನು ಆರೋಗ್ಯಕರವಾಗಿಡಲು ಹಾಗೂ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಸುಮಾರು 8 ಸಾವಿರಕ್ಕೂ ಅಧಿಕ ಕುಟುಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆನೆಗಳನ್ನೇ ಅವಲಂಬಿಸಿವೆ ಎಂದು ತಿಳಿಸಿದ್ದಾರೆ.
ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸುವುದು ಶಿಷ್ಟಾಚಾರದ ಭಾಗವಾಗಿದ್ದು, ಕಣ್ಣು ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಲಾಗಿದೆ. ಕಣ್ಣಿನ ದ್ರವ ಸಂಗ್ರಹಿಸಿ ಪರಿಚಯವಿಲ್ಲದ ಕಾರಣ 26 ವರ್ಷದ ಹೆಣ್ಣಾನೆಯೊಂದು ಈ ಸಂದರ್ಭದಲ್ಲಿ ಸ್ವಲ್ಪ ಭಯ ಪಟ್ಟಿತು. ಈಗಾಗಲೇ ಮಾದರಿ ಸಂಗ್ರಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. 7ರಿಂದ 10 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.