ಮಂಡ್ಯ: ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿರುವ ಕಾಮೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಮೇಗೌಡರ ಕಾಲಿಗೆ ತೀವ್ರವಾದ ಗಾಯವಾಗಿದೆ. ಹೀಗಾಗಿ ಜಿಲ್ಲೆಯ ಮಳವಳ್ಳಿ ತಾಲೂಕಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮೇಗೌಡರ ಎರಡು ಕಾಲುಗಳು ತೀವ್ರವಾಗಿ ಊತಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಕಾಮೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಹಿಂದಿನಿಂದಲೂ ನರಸಂಬಂಧಿ ಕಾಯಿಲೆಯಿಂದ ಕಾಮೇಗೌಡರು ಬಳಲುತ್ತಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ಕಾಮೇಗೌಡರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಇಂದಿನ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡ ಅವರನ್ನು ಶ್ಲಾಘಿಸಿದ್ದರು. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸಮದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರು 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.
ಕುರಿಗಾಹಿಯಾಗಿರುವ ಕಾಮೇಗೌಡ ಅವರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿ ಪಡೆದಿದ್ದರು. ನಾನು ದಾಹ ತೀರಿಸಿಕೊಂಡೆ, ಆದ್ರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.
ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕಾಮೇಗೌಡರು ಸದ್ಯ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.