ಉಡುಪಿ: ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ.
ಈ ಹೆದ್ದಾರಿ ಹಾದು ಹೋಗುವ ಪರ್ಕಳದಿಂದ ಹಿರಿಯಡ್ಕ ವರೆಗೆ ಚತುಷ್ಪಥ ಹಾಗೂ ಹಿರಿಯಡ್ಕದಿಂದ ಹೆಬ್ರಿ ವರೆಗೆ ದ್ವಿಪಥವಾಗಿ ಅಭಿವೃದ್ಧಿಪಡಿಸಲು ಒಟ್ಟು ರೂ. 350 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಅನುಮೋದನೆ ನೀಡಿದೆ. ಕಳೆದ 20 ವರ್ಷದಿಂದ ಬಹಳ ಬೇಡಿಕೆಯಿದ್ದ ರಸ್ತೆಗೆ ಸರ್ಕಾರ ಅನುಮೋದನೆ ನೀಡಿದ್ದರಿಂದ ಮೀನುಗಾರಿಕಾ ವಹಿವಾಟು, ಮಲ್ಪೆ ಕಡಲ ತೀರಕ್ಕೆ ಪ್ರವಾಸಿಗರ ಓಡಾಟ ಮಾಡಲು ಅನುಕೂಲವಾಗಲಿದೆ.
ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಂ ಹೆದ್ದಾರಿಯ ಮಲ್ಪೆಯಿಂದ ಹೆಬ್ರಿವರೆಗೆ ಸಮಗ್ರ ಅಭಿವೃದ್ಧಿಯ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಮಾರ್ಚ್ 23 ರಂದು ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಉಡುಪಿ ಜಿಲ್ಲೆಯ ಬಹು ಬೇಡಿಕೆಯಾಗಿರುವ ಈ ಪ್ರಮುಖ ಹೆದ್ದಾರಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ ಹೆದ್ದಾರಿ ಅಭಿವೃದ್ಧಿಯ ಪ್ರಾಮುಖ್ಯತೆಯ ವಸ್ತುಸ್ಥಿತಿಗಳನ್ನು ಮನವರಿಕೆ ಮಾಡಿ ನಂತರ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.