ಮುಂಬೈ: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾಗೆ ಸೀತೆಯಾಗಿ ಬಾಲಿವುಡ್ ಕ್ಯೂಟ್ ಬ್ಯೂಟಿ ಕೃತಿ ಸನನ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.
ಬಾಹುಬಲಿ ಮತ್ತು ಸಾಹೋ ನಂತರ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಈಗಾಗಲೇ ಪ್ರಭಾಸ್ ಮತ್ತು ಕನ್ನಡತಿ ಪೂಜಾ ಹೆಗ್ಡೆ ಅಭಿನಯದ ರಾಧೆ ಶಾಮ್ ಮೂವಿ ಶೂಟಿಂಗ್ ನಡೆಯುತ್ತಿದೆ. ಇದರ ಜೊತೆಗೆ ಪ್ರಭಾಸ್ ಆದಿಪುರುಷ ಸಿನಿಮಾದ ತಯಾರಿ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಮಾಹಿತಿಯೊಂದು ಹೊರ ಬಿದ್ದಿದ್ದು, ಸೀತೆಯ ಪಾತ್ರದಲ್ಲಿ ಕೃತಿ ಸನನ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದೆ ಈ ಸಿನಿಮಾದಲ್ಲಿ ನಾಯಕನಾಗಿ ಪ್ರಭಾಸ್ ಮತ್ತು ಖಳನಾಯಕನಾಗಿ ಸೈಫ್ ಅಲಿಖಾನ್ ಕಾಣಿಸಿಕೊಳ್ಳಿದ್ದಾರೆ ಎಂದು ಪೋಸ್ಟರ್ ಮೂಲಕ ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ಈ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಬಾಹುಬಲಿಯ ದೇವಸೇನಾ ಅನುಷ್ಕಾ ಶೆಟ್ಟಿ, ಕಿಯಾರ ಅದ್ವಾನಿ, ದೀಪಿಕಾ ಪಡುಕೋಣೆ ಮತ್ತು ಕೀರ್ತಿ ಸುರೇಶ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಕೊನೆಯದಾಗಿ ಕೃತಿ ಸನನ್ ಅವರು ಸೀತೆಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
ಬಾಹುಬಲಿ ಮತ್ತು ಸಹೋ ಸಿನಿಮಾ ಮಾಡಿ ಗೆದ್ದು ಬೀಗಿರುವ ಪ್ರಭಾಸ್ ಅವರ ಮೇಲೆ ಹೆಚ್ಚಿನ ನೀರಿಕ್ಷೆಯಿದ್ದು, ಅವರ ಮುಂದಿನ ಮೂವಿಗೆ ವಿಶ್ವದ್ಯಾಂತ ಯಂಗ್ ರೆಬೆಲ್ ಸ್ಟಾರ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಿಪುರುಷನ ಬಿಡುಗಡೆಯ ದಿನಾಂಕ ಕೂಡ ಈಗಾಗಲೇ ಘೋಷಣೆಯಾಗಿದ್ದು, 2022ರ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ. ಪ್ರಭಾಸ್ ಅವರ ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ನಿರ್ಮಾಣವಾಗಲಿದೆ.
ಈ ಸಿನಿಮಾ ರಾಮಯಾಣದ ಕಥಾ ಹಂದರವನ್ನು ಹೊಂದಿದ್ದು, ಇದಕ್ಕೆ ಅದಿಪುರುಷ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಳ್ಳಿದ್ದು, ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಕೃತಿ ಸನನ್ ಅವರು ಅಭಿನಯಿಸಲಿದ್ದಾರೆ. ಸಿನಿಮಾದ ಇನ್ನೊಂದು ಪ್ರಮುಖ ಅಂಶವೆಂದರೆ ಮೊದಲ ಬಾರಿಗೆ ಬಾಲಿವುಡ್‍ನ ಸ್ಟಾರ್ ನಟ ಸೈಫ್ ಅಲಿಖಾನ್ ನೆಗೆಟಿವ್ ರೋಲ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಓಂ ರಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ.