ಆತ್ಮಹತ್ಯೆಗೆ ಯೋಚಿಸಿದ್ದ ರಾಬಿನ್ ಉತ್ತಪ್ಪ

Public TV
2 Min Read
Robin Uthappa A 1

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ರಾಬಿನ್ ಉತ್ತಪ್ಪ ಆತ್ಮಹತ್ಯೆಗೆ ಯೋಚಿಸಿದ್ದ ಕ್ಷಣವನ್ನು ನೆನೆದಿದ್ದಾರೆ.

ರಾಯಲ್ ರಾಜಸ್ಥಾನ್ ಫೌಂಡೇಶನ್‍ನ ‘ಮೈಂಡ್, ಬಾಡಿ ಅಂಡ್ ಸೋಲ್’ ಎಂಬ ಲೈವ್ ಸಂವಾದದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, “2006ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದಾಗ ನನ್ನ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. 2009ರಿಂದ 2011 ರವರೆಗೆ ತುಂಬಾ ಕಷ್ಟದ ಅವಧಿಯನ್ನು ಎದುರಿಸಿದ ನಂತರ ಈ ಹಂತವನ್ನು ತಲುಪಿದ್ದೇನೆ. ಆ ಸಮಯದಲ್ಲಿ ಸಾಕಷ್ಟು ಖಿನ್ನತೆ ಒಳಗಾಗಿದ್ದೆ, ಪ್ರತಿದಿನ ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡುತ್ತಿದ್ದೆ” ಎಂದು ರಿವೀಲ್ ಮಾಡಿದ್ದಾರೆ.

Robin Uthappa

2009ರಿಂದ 2011ರ ಅವಧಿ ನಾನು ಪ್ರತಿದಿನ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದ ಕಾಲಘಟ್ಟ. ಅಂದು ಅನುಭವಿಸಿದ ನೋವು ಇಂದಿಗೂ ನನಗೆ ನೆನಪಿದೆ. ಆಗ ಕ್ರಿಕೆಟ್ ಬಗ್ಗೆ ಸ್ವಲ್ಪ ಯೋಚಿಸುತ್ತಿದ್ದ, ಮುಂದೆ ಏನಾಗುತ್ತೆ? ನನ್ನ ಜೀವನದಲ್ಲಿ ಏನಾಗುತ್ತಿದೆ ಮತ್ತು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇನೆ” ಎಂಬ ನೂರೆಂಟು ಪ್ರಶ್ನೆಗಳು ಕಾಡಿದ ಕಾಲವದು ಎಂದು ಉತ್ತಪ್ಪ ನೆನೆದಿದ್ದಾರೆ.

“ಆತ್ಮಹತ್ಯೆಯಂತಹ ಆಲೋಚನೆಯಿಂದ ನನ್ನನ್ನು ದೂರವಿಡಲು ಕ್ರಿಕೆಟ್ ಸಾಕಷ್ಟು ಸಹಾಯ ಮಾಡಿದೆ. ಆದಾಗ್ಯೂ ಪಂದ್ಯಗಳಿಲ್ಲದ ದಿನಗಳನ್ನು ಕಳೆಯುವುದು ತುಂಬಾ ಕಷ್ಟದ ವಿಚಾರವಾಗಿತ್ತು. ಕಷ್ಟದ ಸಮಯದಲ್ಲಿ ಒಂದೇ ಸ್ಥಳದಲ್ಲೇ ಕುಳಿತುಕೊಳ್ಳುತ್ತಿದ್ದೆ. ಕೆಲವೊಮ್ಮೆ ಓಡಿ ಬಾಲ್ಕನಿಯಲ್ಲಿ ಜಿಗಿಯುತ್ತೇನೆ ಎನ್ನುವ ಭಯ ಕಾಡುತ್ತಿತ್ತು. ಆದರೆ ನನ್ನ ಮನಸ್ಸಿನಲ್ಲಿ ಏನೋ ಇತ್ತು ಅದು ನನ್ನನ್ನು ತಡೆಯುತ್ತಿತ್ತು. ಈ ವಿಚಾರವನ್ನು ಡೈರಿಯಲ್ಲಿ ಬರೆಯಲು ಪ್ರಾರಂಭಿಸಿದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಇದರಿಂದಾಗಿ ಕೆಟ್ಟ ಆಲೋಚನೆಗಳಿಂದ ಹೊರ ಬಂದೆ” ಎಂದು ಹೇಳಿದರು.

Robin uthappa b

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅವರನ್ನು ಈ ಬಾರಿ ಐಪಿಎಲ್ ಟೂರ್ನಿಗೆ ಫ್ರ್ಯಾಂಚೈಸ್ ರಾಜಸ್ಥಾನ್ ರಾಯಲ್ಸ್ (ಆರ್‍ಆರ್) 3 ಕೋಟಿ ರೂ.ಗೆ ಖರೀದಿಸಿದೆ. ಉತ್ತಪ್ಪ ಕೊನೆಯದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದರು. ಕೊರೊನಾ ವೈರಸ್ ಹಾಗೂ ಲಾಕ್‍ಡೌನ್‍ನಿಂದಾಗಿ ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.

ಟಿ20ಯಲ್ಲಿ ಮೊದಲ 50+ ರನ್ ಸಿಡಿಸಿದ ಭಾರತೀಯ:
ಪಾಕಿಸ್ತಾನ ವಿರುದ್ಧದ 2007ರ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅರ್ಧಶತಕ ದಾಖಲಿಸಿದ್ದರು. ಪಂದ್ಯದ ಮೊದಲ ಓವರಿನಲ್ಲಿ ಗೌತಮ್ ಗಂಭೀರ್ ವಿಕೆಟ್ ಒಪ್ಪಿಸಿದ ಬಳಿಕ ಉತ್ತಪ್ಪ ಬ್ಯಾಟಿಂಗ್‍ಗೆ ಕಾಲಿಟ್ಟರು. ಮುಂದಿನ ಆರು ಓವರ್ ಗಳಲ್ಲಿ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಟ್ರೈಕ್‍ನಲ್ಲಿದ್ದ ರಾಬಿಲ್ ಉತ್ತಪ್ಪ ಅವರ ಮೇಲೆ ತಂಡವನ್ನು ಗೆಲ್ಲಿಸುವ ಒತ್ತಡ ಬಿದ್ದಿತ್ತು.

Robin uthappa a

ಬಳಿಕ ಮೈದಾನಕ್ಕಿಳಿದ ಎಂ.ಎಸ್.ಧೋನಿ ಉತ್ತಪ್ಪ ಅವರಿಗೆ ಸಾಥ್ ನೀಡಿದರು. ಈ ವೇಳೆ ಉತ್ತಪ್ಪ ಸಿಕ್ಸರ್, ಬೌಂಡರಿ ಚಚ್ಚಿದರು. ಶಾಹಿತ್ ಅಫ್ರಿದಿ ಓವರಿನಲ್ಲಿ ಉತ್ತಪ್ಪ ಅವರು ಕ್ರಮವಾಗಿ 1, 4, 2, 4, 1 ರನ್ ಗಳಿಸಿದರು. ಈ ಮೂಲಕ ತಾವು ಎದುರಿಸಿದ 37ನೇ ಎಸೆತದಲ್ಲಿ ಕನ್ನಡಿಗ ಉತ್ತಪ್ಪ ಅರ್ಧ ಶತಕ ದಾಖಲಿಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಅರ್ಧ ಶತಕ ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನು ಮಾಡಿದ್ದರು. ವಿಪರ್ಯಾಸವೆಂದರೆ ಉತ್ತಪ್ಪ ಅವರು ಆ ಬಳಿಕ ಆಡಿದ 12 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 50 ರನ್ ಗಳಿಸಲು ವಿಫಲರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *