ಕಲಬುರಗಿ: ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ನೀರಿಗೆ ಬಿದ್ದ ವೃದ್ಧೆಯನ್ನು ಗುರುಬಾಯಿ(60) ಎಂದು ಗುರುತಿಸಲಾಗಿದೆ. ಇವರು ಆಳಂದ ಮೂಲದವರಾಗಿದ್ದಾರೆ. ವೃದ್ಧೆಯನ್ನು ರಕ್ಷಿಸಿದ ಪೊಲೀಸ್ ಪೇದೆ ಅನಿಲ್‍ಕುಮಾರ ಆಗಿದ್ದಾರೆ. ಇವರು ಕಲಬುರಗಿ ಜಿಲ್ಲೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾತ್ರಿ ವೇಳೆಯಲ್ಲಿ ವೃದ್ಧೆ ಕಟ್ಟಿಸಂಗಾವಿ ಬಳಿಯ ಭೀಮಾ ಬ್ರೀಡ್ಜ್‍ನ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹಾರಿದ್ದಾರೆ. ಆದರೆ ಅದೃಷ್ಟವಶಾತ್ ಅಂಚಿನಲ್ಲಿ ಹಾಕಿದ್ದ ಕಬ್ಬಿಣದ ರಾಡಿಗೆ ವೃದ್ದೆ ಜೋತು ಬಿದ್ದಿದ್ದಾರೆ. ಅದೇ ವೇಳೆ ಭೀಮಾ ಬ್ರಿಡ್ಜ್ ಮೇಲೆ ಗಸ್ತಿನಲ್ಲಿದ್ದ ಪೇದೆ ಅನಿಲ್‍ಕುಮಾರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧೆಯನ್ನು ನೋಡಿ ತಕ್ಷಣ ರಕ್ಷಣೆಗೆ ಮುಂದಾಗಿ ಕಾಪಾಡಿದ್ದಾರೆ.
ಹೊಸ ವರ್ಷದ ದಿನದಂದು ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಅನಿಲ್‍ಕುಮಾರ್ ಅವರು ವೃದ್ಧೆಯನ್ನು ರಕ್ಷಣೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.