ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆಸ್ಪತ್ರೆಗೆ ಮಗ ಕರೆತಂದಿದ್ದಾನೆ. ಆದರೆ ಆಸ್ಪತ್ರೆಗೆ ದಾಖಲಿಸಲಾಗದೆ ಆಕೆ ಆಟೋದಲ್ಲೇ ಪ್ರಾಣ ಬಿಡುವುದನ್ನು ನೋಡುತ್ತಾ ಅಸಹಾಯಕನಾಗಿ ನಿಂತಿದ್ದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮುಕುಲ್(28) ತನ್ನ ತಾಯಿ ಕಿರಣ್ ವ್ಯಾಸ(52) ಅವರನ್ನು ಆಸ್ಪತ್ರೆಗೆ ಕರೆತಂದಿದ್ದನು. ಸರ್ದಾರ್ ವಲ್ಲಭಾಯಿ ಪಟೇಲ್ ಆಸ್ಪತ್ರೆಗೆ ಸೇರಿಸಲೆಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಯವರು ರೋಗಿಯನ್ನು ದಾಖಲಿಸಿಕೊಳ್ಳುವ ಮೊದಲು ಅನೇಕ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಜಿಲ್ಲಾ ಕಣ್ಗಾವಲು ಅಧಿಕಾರಿಯಿಂದ ರೆಫರೆನ್ಸ್ ಪತ್ರ ತರಬೇಕು. ನಿಮಗೆ ಮೆಸೇಜ್ ಬರುತ್ತೆ ಅದನ್ನು ಕೊಡಬೇಕು. ಹೀಗೆ ನಾನಾ ರೀತಿಯ ನಿಯಮಗಳನ್ನು ಹೇಳಿದ್ದಾರೆ. ಗಂಟೆಗಟ್ಟಲೆ ಆ ಕೆಲಸದಲ್ಲೇ ಮುಕುಲ್ ಕಾಲ ಕಳೆದಿದ್ದಾರೆ.
ಇತ್ತ ಆಟೋದಲ್ಲೇ ಇದ್ದ ಕಿರಣ್‍ಗೆ ಉಸಿರಾಟ ತೊಂದರೆ ತೀವ್ರವಾಗಿ ಕೊನೆಯುಸಿರೆಳೆದಿದ್ದಾರೆ. ಅದಾದ ನಂತರ ಮುಕುಲ್ ತನ್ನ ತಾಯಿ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ್ದಾರೆ. ಒಬ್ಬರು ಸಾಯುತ್ತಿದ್ದರೆ ಅವರು ಜೀವ ಮುಖ್ಯವೋ ಅಥವಾ ನಿಮಗಳ ಪಾಲನೆ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ.