ಬರೇಲಿ: ಆಟ ಆಡುವ ವೇಳೆ ನಡೆದ ಜಗಳದಲ್ಲಿ 7 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕ ಕತ್ತನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಸಂಬಂಧಿಕರಾಗಿದ್ದು ಮಕ್ಕಳ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಇಬ್ಬರು ಮನೆಯ ಹೊರಗಡೆ ಆಟ ಆಡುತ್ತಿದ್ದಾಗ ಜಗಳ ನಡೆದಿದೆ.
ಸಿಟ್ಟಾದ 7 ವರ್ಷದ ಬಾಲಕ ಮನೆಗೆ ತೆರಳಿ ಚಾಕು ತಂದು ಇರಿದಿದ್ದಾನೆ. ಬಾಲಕನ ಕಿರುಚಾಟ ಕೇಳಿ ಅಲ್ಲಿದ್ದವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಸಂತ್ರಸ್ತ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ನಂತರ ಕುಟುಂಬದ ಸದಸ್ಯರ ಮಾತುಕತೆಯ ಬಳಿಕ ದೂರನ್ನು ಹಿಂಪಡೆಯಲಾಗಿದೆ.
ಹಿರಿಯ ಸಹೋದರ ತಪ್ಪಾಗಿ ಕಿರಿಯ ಸಹೋದರನ ಮೇಲೆ ಚಾಕು ಇರಿದಿದ್ದಾನೆ. ಈ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಎರಡು ಕುಟುಂಬಗಳ ಸದಸ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ.